ಮಡಿಕೇರಿ ಜ.16 : ಚೆಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಈರಳೆವಳಮುಡಿ ಶಾಖೆಯ ವಾಯುಪುತ್ರ ಭವನದಲ್ಲಿ “ಶ್ರೀಪಂಚಮುಖಿ ವಾಯುಪುತ್ರ” ಮೂರ್ತಿಯನ್ನು ಅನಾವರಣಗೊಳಿಸಲಾಯಿತು.
ಸುಮಾರು 9 ಅಡಿ ಎತ್ತರದ ಆಂಜನೇಯನಿಗೆ ಮಕ್ಕಳಿಂದ ಅಭಿಷೇಕ ಮತ್ತು ಅರ್ಚಕರಿಂದ ವಿಶೇಷ ಪೂಜೆ, ಧಾರ್ಮಿಕ ವಿಧಿ ವಿಧಾನಗಳು ನಡೆಯಿತು. ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆ ನಡೆದ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮಡಿಕೇರಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಶೈಕ್ಷಣಿಕ ಪ್ರಗತಿಗೆ ಊರಿನಲ್ಲಿ ಜ್ಞಾನದೇಗುಲವಿರಬೇಕು, ಅದೇ ರೀತಿ ಊರು ಸುಭಿಕ್ಷವಾಗಿರಲು ದೇವಾಲಯಗಳಿರಬೇಕು ಎಂದರು.
ಒಗ್ಗಟ್ಟಿನ ಬಲದಿಂದ ಚೆಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಸಂಘ ಅಭ್ಯುದಯವನ್ನು ಸಾಧಿಸುತ್ತಿದೆ. ಸಂಘದ ಮೂಲಕ ದೇವರ ಮೂರ್ತಿಗಳನ್ನು ಸ್ಥಾಪಿಸಿ ಶ್ರದ್ಧೆ ಮತ್ತು ಭಕ್ತಿಗೆ ಆದ್ಯತೆ ನೀಡುತ್ತಿರುವುದು ಶ್ಲಾಘನೀಯವೆಂದರು.
ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಪಿ.ಕೃಷ್ಣಮೂರ್ತಿ ಮಾತನಾಡಿ ಉತ್ತಮ ಕಾರ್ಯಗಳ ಮೂಲಕ ಮನುಷ್ಯ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
“ಶ್ರೀ ಪಂಚಮುಖಿ ವಾಯುಪುತ್ರ” ಮೂರ್ತಿಯನ್ನು ಕೆತ್ತಿದ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಲ್ಪಿ ಕಾರ್ಕಳದ ಗುಣವಂತೇಶ್ವರ ಭಟ್ ಅವರು ಉಪನ್ಯಾಸ ನೀಡಿ ಮಾತನಾಡಿ ಹಿಂದೂ ಧಾರ್ಮಿಕ ಆಚರಣೆಗಳಿಗೆ ತನ್ನದೇ ಆದ ಪಾವಿತ್ರ್ಯತೆ ಇದೆ. ಇದನ್ನು ಶ್ರದ್ಧೆಯಿಂದ ಪರಿಪಾಲಿಸಬೇಕು ಎಂದರು.
ಬಲ್ಲಾರಂಡ ಮಣಿ ಉತ್ತಪ್ಪ ಅವರ ನಿರಂತರ ಪ್ರಯತ್ನದ ಫಲವಾಗಿ ಅನೇಕ ದೇವರುಗಳ ಮೂರ್ತಿಗಳು ಪ್ರತಿಷ್ಠಾಪನೆಗೊಂಡಿದ್ದು, ಇದು ಅವರ ಭಕ್ತಿಗೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.
ಹಿರಿಯರಾದ ಚೇರಳ ತಮ್ಮಂಡ ಮುದ್ದಮಯ್ಯ ಮಾತನಾಡಿ ಚೆಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಪ್ರಗತಿಯ ಬಗ್ಗೆ ಶ್ಲಾಘಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿಉತ್ತಪ್ಪ ಗ್ರಾಮಸ್ಥರು, ರೈತ ಸದಸ್ಯರು ಹಾಗೂ ದಾನಿಗಳ ಸಹಕಾರದಿಂದ ಸಂಘ ಏಳಿಗೆಯನ್ನು ಸಾಧಿಸುತ್ತಿದೆ. ಅಭಿವೃದ್ಧಿ ಕಾರ್ಯಗಳಿಗೆ ಹಲವು ಅಡಚಣೆಗಳು ಎದುರಾದರು ಕಾನೂನು ಹೋರಾಟದ ಮೂಲಕ ಜಯವನ್ನು ಸಾಧಿಸಿದ್ದೇವೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ಚೆಟ್ಟಳ್ಳಿಯಲ್ಲಿ ಶ್ರೀ ಚಾಮುಂಡೇಶ್ವರಿ ತಾಯಿಯ ಮೂರ್ತಿಯನ್ನು ಪ್ರತಿಷ್ಠಾಪಿಸಲು ಯೋಜನೆಯನ್ನು ರೂಪಿಸಲಾಗಿದೆ ಎಂದು ತಿಳಿಸಿದರು.
::: ಸನ್ಮಾನ :::
ಶಿಲ್ಪಿ ಕಾರ್ಕಳದ ಶ್ರೀಗುಣವಂತೇಶ್ವರ ಭಟ್, ದಾನಿಗಳಾದ ಚೇರಳ ತಮ್ಮಂಡ ಮುದ್ದಮಯ್ಯ ಹಾಗೂ ಉದ್ಯಮಿ ಶ್ರೀನಿವಾಸ್ ಅವರನ್ನು ಸಭೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಪಂಚಮುಖಿ ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ನೆರೆದಿದ್ದವರಿಗೆ ಅನ್ನ ಸಂತರ್ಪಣೆಯಾಯಿತು.
ಮಣಿಉತ್ತಪ್ಪ ಸ್ವಾಗತಿಸಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಂದಿನಿ ಕೆ.ಎಸ್ ವಂದಿಸಿದರು. ಸಂಘದ ನಿರ್ದೇಶಕರುಗಳು, ಸದಸ್ಯರು, ವಿವಿಧ ಸಂಘಸಂಸ್ಥೆಗಳ ಪ್ರಮುಖರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.