ಮಡಿಕೇರಿ ಜ.16 : ಕ್ಷೇತ್ರಗಳ ಪುನರ್ ವಿಂಗಡಣೆ ಸಂದರ್ಭ ಕೊಡಗು ಜಿಲ್ಲಾ ಪಂಚಾಯತ್ ಕ್ಷೇತ್ರಗಳನ್ನು 29 ರಿಂದ 25 ಕ್ಕೆ ಇಳಿಕೆ ಮಾಡಿರುವ ಕ್ರಮವನ್ನು ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ಪಂಚಾಯತ್ ರಾಜ್ ನಿರ್ದೇಶಕರು ಮತ್ತು ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿಗಳು ಹಾಗೂ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗದ ಸದಸ್ಯ ಕಾರ್ಯದರ್ಶಿಗಳಿಗೆ ಆಕ್ಷೇಪ ಸಲ್ಲಿಸಿದೆ.
ಈ ಹಿಂದೆ ಇದ್ದ 29 ಕ್ಷೇತ್ರಗಳಿಗೆ 5 ನ್ನು ಹೆಚ್ಚುವರಿಯಾಗಿ ಸೇರ್ಪಡೆ ಮಾಡಿ 34 ಜಿ.ಪಂ ಕ್ಷೇತ್ರಗಳನ್ನು ರಚಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಕೊಡಗು ಜಿಲ್ಲೆಯು ಗುಡ್ಡಗಾಡು ಪ್ರದೇಶವಾಗಿದ್ದು, ಜನಸಂಖ್ಯೆಯೂ ಕೂಡ ಚದುರಿರುತ್ತದೆ. ಒಂದು ಕ್ಷೇತ್ರದಿಂದ ಇನ್ನೊಂದು ಕ್ಷೇತ್ರವನ್ನು ವಿಂಗಡಿಸುವ ಸಂದರ್ಭ ಮತದಾರರು ಬಹಳಷ್ಟು ದೂರ ಕ್ರಮಿಸುವುದು ಅವೈಜ್ಞಾನಿಕ ರೀತಿಯ ಪ್ರಕ್ರಿಯೆಯಾಗಿರುತ್ತದೆ.
ಭೌಗೋಳಿಕ ಹಿನ್ನೆಲೆಯಲ್ಲಿ ಈ ಹಿಂದೆ ಇದ್ದ 29 ಕ್ಷೇತ್ರಗಳನ್ನು ಪರಿಷ್ಕರಿಸುವ ಸಂದರ್ಭ ಕನಿಷ್ಟ 5 ಸ್ಥಾನಗಳನ್ನು ಹೆಚ್ಚುವರಿ ಮಾಡಿ ಒಟ್ಟು 34 ಕ್ಷೇತ್ರವನ್ನು ಮಾಡಬೇಕೆಂಬ ಜಿಲ್ಲೆಯ ಜನತೆಯ ಬೇಡಿಕೆಯನ್ನು ಪರಿಗಣಿಸದೇ ಇದ್ದು 29 ಕ್ಷೇತ್ರದಲ್ಲಿ 4 ಕ್ಷೇತ್ರಗಳನ್ನು ಕಡಿತಗೊಳಿಸಲಾಗಿದೆ. ಇದಕ್ಕೆ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಆಕ್ಷೇಪ ವ್ಯಕ್ತಪಡಿಸಿ ಮರು ಪರಿಶೀಲನೆಗೆ ಒತ್ತಾಯಿಸಿದೆ.
ಅಲ್ಲದೆ ಕುಶಾಲನಗರ ತಾಲ್ಲೂಕಿನ ಮುಳ್ಳುಸೋಗೆ ಗ್ರಾಮವನ್ನು ಈಗಾಗಲೇ ಕುಶಾಲನಗರದ ನೂತನ ಪುರಸಭಾ ವ್ಯಾಪ್ತಿಗೆ ಸೇರ್ಪಡೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದ್ದರೂ, 14ನೇ ನಂಬರಿನ ಕೂಡುಮಂಗಳೂರು ಕ್ಷೇತ್ರಕ್ಕೆ ಮುಳ್ಳುಸೋಗೆ ಪಂಚಾಯತ್‍ನ್ನು ಸೇರಿಸಿರುವುದು ಸರಿಯಲ್ಲ. ವಾಲ್ನೂರು, ತ್ಯಾಗತ್ತೂರು ಕ್ಷೇತ್ರ ಸಂಖ್ಯೆ 12ಕ್ಕೆ ಸೇರ್ಪಡೆಗೊಂಡಿರುವ ಗ್ರಾಮಗಳನ್ನು ತಾಲ್ಲೂಕು ಪಂಚಾಯಿತಿ ವ್ಯಾಪ್ತಿಗೂ ಒಳಪಡಿಸಿರುವುದು ಅವೈಜ್ಞಾನಿಕ ಕ್ರಮವಾಗಿದೆ.
ಮಕ್ಕಂದೂರು ಜಿ.ಪಂ ಕ್ಷೇತ್ರ ಸಂ.1 ಮಡಿಕೇರಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟಿರುತ್ತದೆ. ಆದರೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಮೇಕೇರಿ ಗ್ರಾ.ಪಂ ಅನ್ನು ಮಕ್ಕಂದೂರು ಕ್ಷೇತ್ರಕ್ಕೆ ಸೇರ್ಪಡೆಗೊಳಿಸಿರುವುದು, ಸಂ.2 ಕಾಂತೂರು ಮೂರ್ನಾಡು ಕ್ಷೇತ್ರಕ್ಕೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಹಾಕತ್ತೂರು ಗ್ರಾ.ಪಂ ಕ್ಷೇತ್ರವನ್ನು ಸೇರ್ಪಡೆಗೊಳಿಸಿರುವುದು ಸರಿಯಲ್ಲ.
ಬಿಳುಗುಂದ ಕ್ಷೇತ್ರದ ಸಂ.9ರ ಕಾರ್ಯವ್ಯಾಪ್ತಿ ಕೂಡ ಆಕ್ಷೇಪಣೆಗೆ ಒಳಪಟ್ಟಿರುತ್ತದೆ. ಈ ಕ್ಷೇತ್ರದ ಬೇಳೂರು ಬಸವನಹಳ್ಳಿ ಗ್ರಾಮವೂ ತಾಲ್ಲೂಕು ಪಂಚಾಯತ್ ವ್ಯಾಪ್ತಿಗೂ ಒಳಪಟ್ಟಿರುತ್ತದೆ. ಹೀಗೆ ಪರಿಷ್ಕರಣೆಗೆ ಒಳಪಟ್ಟ ಕೊಡಗು ಜಿ.ಪಂ ನ ಸದಸ್ಯರ ಸಂಖ್ಯೆ ಮತ್ತು ಒಟ್ಟು ವ್ಯಾಪ್ತಿ ಅವೈಜ್ಞಾನಿಕ ರೂಪದಲ್ಲಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 160, 161 ಮತ್ತು 163ರ ಅನ್ವಯ ಹಾಗೂ 308 (ಇ) (ಎಫ್)ರ ಪ್ರಕರಣದಡಿ ಪ್ರದತ್ತವಾದ ಅಧಿಕಾರದ ಚಲಾವಣೆಯ ಸಂದರ್ಭ ಕೊಡಗು ಜಿ.ಪಂ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಜಿಲ್ಲೆಗೆ ಅನ್ಯಾಯವಾಗುತ್ತಿದೆ. ಆದ್ದರಿಂದ ಈ ಹಿಂದೆ ಇದ್ದಂತಹ 29 ಕ್ಷೇತ್ರಗಳಿಗೆ ಹೆಚ್ಚುವರಿಯಾಗಿ 5 ಕ್ಷೇತ್ರಗಳನ್ನು ಸೇರಿಸಿ, ಒಟ್ಟು 34 ಜಿ.ಪಂ ಕ್ಷೇತ್ರ ಎಂದು ಪರಿಗಣಿಸಿ ವೈಜ್ಞಾನಿಕ ರೂಪದಲ್ಲಿ ಕ್ಷೇತ್ರವಾರು ವಿಂಗಡಣೆ ಮಾಡಬೇಕೆಂದು ಆಕ್ಷೇಪಣಾ ಪತ್ರದಲ್ಲಿ ಕಾಂಗ್ರೆಸ್ ಮನವಿ ಮಾಡಿದೆ.
Breaking News
- *ಜಯ ಹೇ ಕರ್ನಾಟಕ ಮಾತೆ ಗೀತೆಗೆ 100 ವರ್ಷ : ಕೊಡಗಿನಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು*
- *ಕೊಡವ ನ್ಯಾಷನಲ್ ಡೇ ಹಿನ್ನೆಲೆ : ದೇವಟ್ ಪರಂಬುವಿನಲ್ಲಿ ಸಿಎನ್ಸಿ ಪ್ರಾರ್ಥನೆ*
- *ವೀರ ಸೇನಾನಿಗಳಿಗೆ ಅಗೌರವ : ಮಡಿಕೇರಿ ತಾಲ್ಲೂಕು ಒಕ್ಕಲಿಗರ ಸಂಘ ಖಂಡನೆ*
- *ಕೊಡವ ಮಕ್ಕಡ ಕೂಟದಿಂದ ದಾಖಲೆಯ 100ನೇ ಪುಸ್ತಕ “100ನೇ ಮೊಟ್ಟ್” ಬಿಡುಗಡೆ : ಭಾಷೆ, ಜಾತಿಯನ್ನು ಮೀರಿದ ಜ್ಞಾನ ಭಂಡಾರವೇ ಸಾಹಿತ್ಯ : ಬಾಚರಣಿಯಂಡ ಅಪ್ಪಣ್ಣ*
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*
- *ವೀರ ಸೇನಾನಿಗಳಿಗೆ ಅವಮಾನ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಖಂಡನೆ*
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*
- *ವಾರ ಭವಿಷ್ಯ: ನ.25 ರಿಂದ ಡಿ.1ರ ವರೆಗೆ ಯಾರ ಭವಿಷ್ಯ ಹೇಗಿದೆ…*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*
- *ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*