ಸುಂಟಿಕೊಪ್ಪ,ಜ.16: ವಿಶೇಷ ಚೇತನ ಬದುಕಿಗೆ ಆಸರೆಯಾಗಲು ಸರಕಾರ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದು, ಅದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ವಿಶೇಷ ಚೇತನರ ಇಲಾಖೆಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಕರೆ ನೀಡಿದರು.
ಸುಂಟಿಕೊಪ್ಪ ಅಂಬೇಡ್ಕರ್ ಭವನದಲ್ಲಿ ನಡೆದ ಗ್ರೇಡ್ 1 ಗ್ರಾ.ಪಂ ಯ ವಿಶೇಷ ಚೇತನರ ಗ್ರಾಮ ಸಭೆಯಲ್ಲಿ ಮಾತನಾಡಿದರು.
ವಿಕಲಚೇತನರು ಶೇ.75 ಇದ್ದವರಿಗೆ ಯಂತ್ರ ಚಾಲಿತ ದ್ವಿಚಕ್ರ ವಾಹನವನ್ನು ಇಲಾಖೆಯಿಂದ ನೀಡಲಾಗುತ್ತಿದೆ. ಇದಕ್ಕೆ ಬಹಳಷ್ಟು ಅರ್ಜಿ ಬರುತ್ತಿದ್ದು, ಕೊಡಗಿಗೆ ಕೇವಲ 5 ದ್ವಿಚಕ್ರ ವಾಹನಕ್ಕೆ ಅನುದಾನ ಲಭ್ಯವಿದೆ. ಜಿಲ್ಲಾಧಿಕಾರಿಗಳ ನೇತೃತ್ವದ ಸಭೆಯಲ್ಲಿ ಅರ್ಹರನ್ನು ಆಯ್ಕೆ ಮಾಡಲಾಗುತ್ತಿದೆ. ಗ್ರಾಮ 1 ಸೇವಾಸಿಂಧು ಕೇಂದ್ರ ತೆರೆಯಲು ವಿಶೇಷ ಚೇತನರಿಗೆ ಸಹಾಯಧನ ನೀಡಲಾಗುತ್ತಿದೆ. ರಿಯಾಯಿತಿ ದರದಲ್ಲಿ ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ಪ್ರಯಾಣಿಸಲು ಅನುವು ಮಾಡಿಕೊಡಲಾಗುತ್ತಿದೆ. ರೈಲಿನಲ್ಲಿ ಸಂಚರಿಸಲು ಉಚಿತಪಾಸ್ ನೀಡಲಾಗುತ್ತಿದೆ. ವಿಕಲಚೇತನರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಮಾನಸಿಕ ಸಮಸ್ಯೆ ಇರುವ ವಿಕಲಚೇತನರಿಗೆ ಉಚಿತ ವೈಧ್ಯಕೀಯ ಚಿಕಿತ್ಸೆ ಲಭ್ಯವಾಗುತ್ತಿದೆ. ಮಲಗಿದಲ್ಲೇ ಇರುವ ವಿಕಲಚೇತನರಿಗೆ ವಾಟರ್ ಬೆಡ್ ಕಲ್ಪಿಸಲಾಗುತ್ತಿದೆ.
ಎಸ್‍ಎಸ್‍ಎಲ್‍ಸಿ ಪಾಸಾದ ಟೈಲರಿಂಗ್ ಕಲಿತ, ಶ್ರವಣದೋಷವುಳ್ಳ ಮಹಿಳೆಯರಿಗೆ ಟೈಲರಿಂಗ್ ಮಿಷನ್ ಇಲಾಖೆಯಿಂದ ನೀಡಲಾಗುವುದೆಂದು ಚಂದ್ರಶೇಖರ್ ತಿಳಿಸಿದರು.
ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್ ಪ್ರಾಸ್ತಾವಿಕವಾಗಿ ಮಾತನಾಡಿ ಗ್ರಾ.ಪಂ ವತಿಯಿಂದ ಶೇ.5 ವಿಕಲಚೇತನರಿಗೆ ಮೀಸಲಿಟ್ಟ ಅನುದಾನವನ್ನು ಪಂಚಾಯಿತಿ ವ್ಯಾಪ್ತಿಯ ಅರ್ಹ ಫಲಾನುಭವಿಗಳಿಗೆ ವಿತರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಂದಿ ಇದ್ದು, ಮೂಲ ಸೌಲಭ್ಯಗಳನ್ನು ಒದಗಿಸಲು ಪಂಚಾಯಿತಿಯು ಕ್ರಮಕೈಗೊಳ್ಳಲಿದೆ ಎಂದು ನುಡಿದರು.
ಗ್ರಾ.ಪಂ.ಅಧ್ಯಕ್ಷರಾದ ಶಿವಮ್ಮ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗ್ರಾ.ಪಂ ಸದಸ್ಯರುಗಳಾದ ಪಿ.ಎಫ್.ಸಬಾಸ್ಟಿನ್, ಪಿ.ಆರ್.ಸುನಿಲ್‍ಕುಮಾರ್, ಸೋಮನಾಥ್, ಶಬ್ಬೀರ್, ರಫೀಕ್‍ಖಾನ್, ವಸಂತಿ, ಲೆಕ್ಕ ಪರಿಶೋಧಕಿ ಚಂದ್ರಕಲಾ ಅಂಬೇಕಲ್, ಬಿಲ್‍ಕಲೆಕ್ಟರ್ ಶ್ರೀನಿವಾಸ್, ಸಿಬ್ಬಂದಿಗಳಾದ ಸಂಧ್ಯಾ, ಡಿ.ಎಂ.ಮಂಜುನಾಥ್ ಹಾಗೂ ಮಂದಣ್ಣ ಇದ್ದರು.