ಮಡಿಕೇರಿ ಜ.16 : ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳು ಇನ್ನು ಉಳಿದಿರುವ ಅವಧಿಯನ್ನು ಸದ್ಬಳಕೆ ಮಾಡಿಕೊಳ್ಳಬೇಕು. ನಿತ್ಯದ ಚಟುವಟಿಕೆ ಹಾಗೂ ಪರೀಕ್ಷಾ ತಯಾರಿ ಸಂಬಂಧ ಪ್ರತ್ಯೇಕ ವೇಳಾಪಟ್ಟಿ ಮಾಡಿಕೊಂಡು ಆ ಮೂಲಕ ಉತ್ತಮ ಫಲಿತಾಂಶ ಗಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕೆಂದು ವ್ಯಕ್ತಿತ್ವ ವಿಕಸನ ಮಾರ್ಗದರ್ಶಕ, ಏಕಲವ್ಯ ಪ್ರಶಸ್ತಿ ವಿಜೇತ ಅಥ್ಲೀಟ್ ತೀತಮಾಡ ಅರ್ಜುನ್ ದೇವಯ್ಯ ಹೇಳಿದರು.
ಕೊಡಗು ವಿಕಸನ ಸಂಸ್ಥೆ ವತಿಯಿಂದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಯೋಗದಲ್ಲಿ ಮಡಿಕೇರಿಯ ಸಂತ ಜೋಸೇಫರ ವಿದ್ಯಾಸಂಸ್ಥೆಯಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ‘ಪರೀಕ್ಷೆ ಸಿದ್ಧತೆ ಮಾರ್ಗದರ್ಶನ’ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು.
ವಿದ್ಯಾರ್ಥಿಗಳ ಕಲಿಕೆಯಲ್ಲಿ ಶಿಕ್ಷಕರ ಪಾತ್ರದ ಜತೆಗೆ ಪೋಷಕರ ಪಾತ್ರ ಬಹಳ ಮುಖ್ಯವಾಗುತ್ತದೆ. ಪೋಷಕರು ಮಕ್ಕಳೊಂದಿಗೆ ಆಪ್ತವಾಗಿದ್ದಷ್ಟು ಮಕ್ಕಳು ಮಾನಸಿಕವಾಗಿ ಬಲವಾಗುತ್ತಾರೆ. ಮನೆಯಲ್ಲಿ ಒಳ್ಳೆಯ ವಾತಾವರಣ ಇದ್ದಾಗ ಮಕ್ಕಳ ಕಲಿಕೆಯ ಆಸಕ್ತಿ ಹೆಚ್ಚುತ್ತದೆ ಎಂದರು.
ಶಾಲೆಯಲ್ಲಿ ಶಿಕ್ಷಕರು ಹೇಳಿಕೊಟ್ಟ ಪಾಠದಲ್ಲಿ ಗೊಂದಲ ಇದ್ದಾಗ ಆ ಬಗ್ಗೆ ಶಿಕ್ಷಕರ ಬಳಿ ಹೇಳಿ ಬಗೆಹರಿಸಿಕೊಳ್ಳಬೇಕು. ಶಿಕ್ಷಕರು ಕೂಡಾ ಮಕ್ಕಳು ಪ್ರಶ್ನೆ ಮಾಡಿದಾಗ ಆಪ್ತವಾಗಿ ಅದಕ್ಕೆ ಪರಿಹಾರ ನೀಡಬೇಕು. ಶಿಕ್ಷಕರು ಕೂಡಾ ಸಹನೆಯಿಂದ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಕಲಿಕೆಗೆ ನೆರವಾಗಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಕೊಡಗು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಆಕಾಶ್ ಮಾತನಾಡಿ, ಪಠ್ಯದ ಪ್ರತಿಯೊಂದು ವಿಚಾರವನ್ನೂ ಆಸಕ್ತಿಯಿಟ್ಟು ಓದಬೇಕು. ಪರೀಕ್ಷೆಗೆ ಇನ್ನು ಕೆಲವೇ ದಿನ ಬಾಕಿಯಿದ್ದು, ಆ ಅವಧಿಯ್ಲ ಶ್ರದ್ಧೆಯಿಂದ ಅಭ್ಯಸಿಸಿದರೆ ಉತ್ತಮ ಅಂಕ ಗಳಿಸಲು ಸಾಧ್ಯವಿದೆ. ನಾನು ಉತ್ತಮ ಸಾಧನೆ ಮಾಡುತ್ತೇನೆ ಎಂಬ ಬಗ್ಗೆ ಪ್ರತಿಯೊಬ್ಬರೂ ಆತ್ಮ ವಿಶ್ವಾಸ ರೂಢಿಸಿಕೊಳ್ಳಬೇಕು. ಹಾಗಾದಾಗ ಮಾತ್ರ ಎಂಥ ಪ್ರಶ್ನೆ ಪತ್ರಿಕೆ ಇದ್ದರೂ ಸಮರ್ಥವಾಗಿ ಉತ್ತರ ಬರೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ವಿಕಸನ ಸಂಸ್ಥೆ ಮೂಲಕ ಉಚಿತವಾಗಿ ಮಾರ್ಗದರ್ಶನ ಕಾರ್ಯಕ್ರಮ ನಡೆಸಿಕೊಟ್ಟ ತೀತಮಾನ ಅರ್ಜುನ್ ದೇವಯ್ಯ ಅವರನ್ನು ಶಾಲಾ ಶಿಕ್ಷಣ ಮತ್ತು ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಸನ್ಮಾನಿಸಲಾಯಿತು.
ಇಲಾಖೆ ಉಪನಿರ್ದೇಶಕ ರಂಗಧಾಮಯ್ಯ ಪ್ರಾಸ್ತಾವಿಕ ಮಾತನಾಡಿದರು. ಬಿಆರ್‍ಸಿ ನಳಿನಿ, ಶಾಲಾ ಮುಖ್ಯಶಿಕ್ಷಕಿ ರೋಜಾ, ಕೊಡಗು ವಿಕಸನದ ಪವನ್ ಕೆಂಚೆಟ್ಟಿ ಮುಂತಾದವರಿದ್ದರು. ಮಡಿಕೇರಿ ಸಂತ ಮೈಕಲರ ವಿದ್ಯಾಸಂಸ್ಥೆ, ಸಂತ ಜೋಸೇಫರ ವಿದ್ಯಾಸಂಸ್ಥೆ, ಕಡಗದಾಳು ಪ್ರೌಢಶಾಲೆ, ಮಕ್ಕಂದೂರು ಪ್ರೌಢಶಾಲೆ, ಗಾಳಿಬೀಡು ಪ್ರೌಢಶಾಲೆ, ಬ್ಲಾಸಂ ಶಾಲೆ, ಮಡಿಕೇರಿ ಸರ್ಕಾರಿ ಜೂನಿಯರ್ ಕಾಲೇಜಿನ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಿಕ್ಷಕಿ ಸ್ವರೂಪ ಸ್ವಾಗತಿಸಿದರು. ಕೊಡಗು ವಿಕಸನ ಸಂಸ್ಥೆಯ ಕಿಶೋರ್ ರೈ ಕತ್ತಲೆಕಾಡು ಕಾರ್ಯಕ್ರಮ ನಿರೂಪಿಸಿದರು.