ಕುಶಾಲನಗರ, ಜ.16: ಕುಶಾಲನಗರ ಪುರಸಭೆ ಮುಖ್ಯಾಧಿಕಾರಿ ಶಿವಪ್ಪ ನಾಯಕ್ ಅವರ ನಿವಾಸಕ್ಕೆ ನುಗ್ಗಿ ಬೆದರಿಸಿ, ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕುಶಾಲನಗರದ ವಿವಿಧ ಸಂಘ, ಸಂಸ್ಥೆಗಳು ಹಾಗೂ ರಾಜಕೀಯ ಪಕ್ಷಗಳು ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದವು.
ಕುಶಾಲನಗರ ಬೈಚನಹಳ್ಳಿಯ ಗೆಳೆಯರ ಬಳಗದ ನೇತೃತ್ವದಲ್ಲಿ ಕೊಡಗು ಜಿಲ್ಲಾ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘ, ಅಖಿಲ ಕರ್ನಾಟಕ ವಾಲ್ಮೀಕಿ ಕ್ಷೇಮಾಭಿವೃದ್ಧಿ ಸಂಘ, ಕುಶಾಲನಗರ ನಗರ ಕಾಂಗ್ರೆಸ್, ಜೆಡಿಎಸ್, ದಲಿತ ಸಂಘರ್ಷ ಸಮಿತಿ (ಭೀಮವಾದ), ಬೀದಿ ಬದಿ ವ್ಯಾಪಾರಿಗಳ ಸಂಘ ಮತ್ತಿತರ ಸಂಘ ಸಂಸ್ಥೆಗಳ ಪ್ರಮುಖರು ಕುಶಾಲನಗರ ಪಟ್ಟಣದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಹಲ್ಲೆ ಮಾಡಿದವರ ವಿರುದ್ಧ ಘೋಷಣೆ ಕೂಗಿ ಕಠಿಣ ಕ್ರಮಕ್ಕಾಗಿ ಒತ್ತಾಯಿಸಿದರು.
ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಅಖಿಲ ಕರ್ನಾಟಕ ವಾಲ್ಮೀಕಿ ಕ್ಷೇಮಾಭಿವೃದ್ದಿ ಸಂಘದ ಜಿಲ್ಲಾಧ್ಯಕ್ಷ ಕೆ.ಎನ್‍ಅಶೋಕ್ , ಗೆಳೆಯರ ಬಳಗದ ಪ್ರಮುಖರು ಪುರಸಭೆ ಸದಸ್ಯರಾದ ಬಿ.ಎಲ್‍ಜಗದೀಶ್, ಬಳಗದ ಪೃಥ್ವಿರಾಜ್, ಪುರಸಭೆ ಸದಸ್ಯರಾದ ಜಯಲಕ್ಷ್ಮಮ್ಮ, ಸುಂದರೇಶ್ ಸೇರಿದಂತೆವಿವಿಧ ಸಂಘಟನೆಗಳ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
::: ಪೌರ ಕಾರ್ಮಿಕರ ಪ್ರತಿಭಟನೆ :::
ಕುಶಾಲನಗರ ಪುರಸಭೆ ಅಧಿಕಾರಿ ಮೇಲೆ ಹಲ್ಲೆ ನಡೆಸಿದ ಪ್ರಕರಣ ಖಂಡಿಸಿ ಪಟ್ಟಣ ಪೌರಕಾರ್ಮಿಕರ ಸಂಘ ಕಪ್ಪು ಪಟ್ಟಿ ಧರಿಸಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿತು. ಸಂಘದ ಅಧ್ಯಕ್ಷ ಎಸ್.ಆರ್‍ಗಣೇಶ್ ಮತ್ತು ಕಾರ್ಯದರ್ಶಿ ನಂಜುಂಡ ಅವರ ನೇತೃತ್ವದಲ್ಲಿ ಪೌರಕಾರ್ಮಿಕರು ಮತ್ತು ಸಿಬ್ಬಂದಿಗಳು ಮೌನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.