ಮಡಿಕೇರಿ ಜ.16 : ಮಂಗಳೂರು ವಿಶ್ವವಿದ್ಯಾನಿಲಯದ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜಿನಲ್ಲಿ ಜಿಲ್ಲಾ ಆರೋಗ್ಯ ಕೇಂದ್ರ ಮತ್ತು ಸ್ವಾಮಿ ವಿವೇಕಾನಂದರ ಯೂತ್ ಮೂವ್ಮೆಂಟ್ ಹಾಗೂ ಎಫ್.ಎಂ.ಸಿ ಕಾಲೇಜಿನ ಎನ್.ಎಸ್.ಎಸ್ ಘಟಕ, ರೆಡ್ ಕ್ರಾಸ್ ಘಟಕದ ಸಹಯೋಗದೊಂದಿಗೆ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ನಡೆಸಲಾಯಿತು.
ಡಾ.ಮೇಜರ್ ಕುಶ್ವಂತ್ ಕೋಳಿಬೈಲು ವಿವೇಕಾನಂದರ ಜೀವನ ಚರಿತ್ರೆಯ ಬಗ್ಗೆ ಹಾಗೂ ಅವರು ಚಿಕ್ಕ ವಯಸ್ಸಿನಲ್ಲಿ ಮಾಡಿದ ಅನನ್ಯ ಸಾಧನೆಯ ಕುರಿತು ವಿಶ್ಲೇಷಿಸಿದರು. ತಮ್ಮ ವಯಸ್ಸಿಗೆ ಮೀರಿದ ಬುದ್ಧಿವಂತಿಕೆ ಹೊಂದಿದ್ದ ವಿವೇಕಾನಂದರು, ವಯಸ್ಸಿಗೆ ಮೀರಿದ ವಾಕ್ಚಾತುರ್ಯವನ್ನು ಹೊಂದಿದ್ದರು.
1893 ರ ಕಾಲಘಟ್ಟದಲ್ಲಿ, ಬೇರೊಂದು ದೇಶಕ್ಕೆ ತೆರಳಿ ನನ್ನ ಅಕ್ಕ ತಂಗಿ, ಅಣ್ಣ ತಮ್ಮಂದಿರೇ ಎಂದು ಸಂಬೋಧಿಸುತ್ತಾರೆ ಅವರ ಮನಸ್ಥೈರ್ಯವನ್ನು ಮೆಚ್ಚಬೇಕು. ಇಂದು ಸ್ವತಂತ್ರವಾಗಿ ಹೇಳಿಕೆಗಳನ್ನು ಹಂಚಿಕೊಳ್ಳುವ ಅವಕಾಶ ಇದೆ. 130 ವರ್ಷಗಳ ಹಿಂದೆ ಹಾಗೊಂದು ಅವಕಾಶ ಬಹಳ ಕಷ್ಟದ ವಿಚಾರವಾಗಿತ್ತು. ಆದರೆ ಅವರು ಅಸಾಧ್ಯವನ್ನು ಸಾಧಿಸಿದಂತವರು. ನಮಗೆಲ್ಲಾ ಪ್ರೇರಣೆ. “ವಿವೇಕಾನಂದರು ಆಧುನಿಕ ಭಾರತದ ನಿರ್ಮಾತೃ” ಎನ್ನುವ ಸುಭಾಷ್ ಚಂದ್ರ ಭೋಸ್ ಅವರ ಮಾತನ್ನು ನೆನಪಿಸಿಕೊಂಡರು.
ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿ ಸುನಿತ ಮುತ್ತಮ್ಮ ಮಾತನಾಡಿ, ಹೆಚ್.ಐ.ವಿ./ಏಡ್ಸ್ ಕುರಿತು ಅಜ್ಞಾನ ಹಾಗೂ ಇದರ ನಿರ್ಲಕ್ಷ್ಯ ಬಹಳ ಅಪಾಯಕಾರಿ ಎಂದು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು. ಸದೃಢ, ಸಮೃದ್ಧ ಭಾರತ ಕಟ್ಟುವಲ್ಲಿ ಶ್ರಮವಹಿಸಬೇಕಾದದ್ದು ನಮ್ಮ ಕರ್ತವ್ಯ ಎಂದು ಹೇಳಿದರು. ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಯುವಜನತೆಯಲ್ಲಿ ಜಾಗೃತಿ ಮೂಡಿಸುವುದಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾರ್ಯಪ್ಪ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಹಾಗೂ ಮೇಜರ್ ಡಾ. ರಾಘವ, ವಿದ್ಯಾರ್ಥಿಗಳು ವಿವೇಕಾನಂದರ ಆದರ್ಶ ತತ್ವಗಳನ್ನು ಪಾಲಿಸಬೇಕು. ಚಿಕ್ಕ ವಯಸ್ಸಿಗೆ ಜಗತ್ತಿನ ದೊಡ್ಡ ಸ್ಥಾನದಲ್ಲಿ ನಿಂತ ವಿವೇಕಾನಂದರು ಯುವ ಪೀಳಿಗೆಗೆ ಆದರ್ಶಪ್ರಿಯರು, ನಮಗೆ ಸಿಗುವ ಸಮಯವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ದೇಶದ ಅಭಿವೃದ್ಧಿಗೆ ನಮ್ಮ ಕೊಡುಗೆಯನ್ನು ನೀಡಬಹುದು. ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಆಲೋಚನೆ ನಡೆಸಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್ ಘಟಕದ ಯೋಜನಾಧಿಕಾರಿ ಡಾ.ಮಹದೇವಯ್ಯ, ಡಾ ಗಾಯತ್ರಿ, ಡಾ.ಗೀತಾಂಜಲಿ, ಯುವ ರೆಡ್ ಕ್ರಾಸ್ ಘಟಕದ ಸದಸ್ಯರು,ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಎನ್.ಎಸ್.ಎಸ್ ಘಟಕದ ನಾಯಕರು ಹಾಜರಿದ್ದರು.
ವರದಿ : ಎಂ.ನಶ್ವಿತಾ