ಮಡಿಕೇರಿ ಜ.17 : ಜಲ ಮತ್ತು ಮಣ್ಣು ಸಂರಕ್ಷಣೆಯ ಸಂದೇಶದೊಂದಿಗೆ ರೈಡ್ ಪಾರ್ ರೋಟರಿ ಹೆಸರಿನ ರೋಟರಿ ಬೈಕ್ ಜಾಥಾ ಇದೇ 24 ರಂದು ಮಡಿಕೇರಿಗೆ ಬರುತ್ತಿದ್ದು, ವಿದೇಶಿಯರೂ ಸೇರಿದಂತೆ ಭಾರತೀಯ ಮೂಲದ 40 ಬೈಕ್ ಸವಾರರು ಜಾಥಾದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ರೋಟರಿ ಜಿಲ್ಲಾ ಗವನ೯ರ್ ಪ್ರಕಾಶ್ ಕಾರಂತ್ ಮಾಹಿತಿ ನೀಡಿದ್ದಾರೆ.
ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಗೆ ಅಧಿಕೃತ ಭೇಟಿ ಸಂದಭ೯ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಪ್ರಕಾಶ್ ಕಾರಂತ್, ರೋಟರಿ ಜಿಲ್ಲೆ 3181 ರ ಮಹತ್ವದ ಯೋಜನೆಯಾದ ರೈಡ್ ಫಾರ್ ರೋಟರಿಯ 7 ನೇ ಆವೃತ್ತಿಯು ತಮಿಳುನಾಡಿನ ಮಹಾಬಲಿಪುರಂನಿಂದ ಇದೇ ಭಾನುವಾರ ಪ್ರಾರಂಭಗೊಂಡಿದ್ದು ವಿವಿಧ ನಗರಗಳನ್ನು ಹಾದು ಜಾಥಾದಲ್ಲಿನ ಸವಾರರು ಜ.24 ರಂದು ಮಂಗಳಪಾರ ಮಡಿಕೇರಿಗೆ ಬರುತ್ತಿದ್ದಾರೆ. ವಿದೇಶದ 36 ಬೈಕ್ ಸವಾರರೂ ಒಳಗೊಂಡಂತೆ 40 ಸವಾರರು ಈ ಜಾಥಾದಲ್ಲಿದ್ದಾರೆ. ಮಣ್ಣು ಮತ್ತು ನೀರಿನ ಸಂರಕ್ಷಣೆಯ ಸಂದೇಶ ಸಾರುವ ಈ ಜಾಥಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾಂದವ್ಯ ವೃದ್ಧಿಗೆ ರೋಟರಿಗೆ ಸಹಕಾರಿಯಾಗಿದೆ ಎಂದರು.
ಜ.24 ರಂದು ಮೇಕೇರಿಯ ಅಂಬರಾ ರೆಸಾಟ್೯ನಲ್ಲಿ ಮಡಿಕೇರಿ ರೋಟರಿ ಸಂಸ್ಥೆಯಿಂದ ಆಯೋಜಿತ ಕಾಯ೯ಕ್ರಮದಲ್ಲಿ ಬೈಕ್ ಸವಾರರಿಗೆ ಕೊಡಗು ಮತ್ತು ಕನ್ನಡನಾಡಿನ ಸಂಸ್ಕೃತಿ ಪರಿಚಯಿಸುವ ವೈವಿಧ್ಯಮಯ ಕಾಯ೯ಕ್ರಮ ಆಯೋಜಿಸಲಾಗಿದೆ ಎಂದೂ ತಿಳಿಸಿದ ಪ್ರಕಾಶ್ ಕಾರಂತ್, ವಿವಿಧ ರೋಟರಿ ಸಂಸ್ಥೆಗಳ ಧ್ವಜ ವಿನಿಯಮ ಕೂಡ ಈ ಕಾಯ೯ಕ್ರಮದ ವಿಶೇಷವಾಗಿದೆ ಎಂದು ತಿಳಿಸಿದರು.
ಅಂತೆಯೇ ಈ ವಷ೯ದ ರೋಟರಿ ಜಿಲ್ಲಾ ಸಮ್ಮೇಳನವು ಇದೇ ತಿಂಗಳ 27 ರಿಂದ 29 ರವರೆಗೆ ಮಂಗಳೂರಿನಲ್ಲಿ ಆಯೋಜಿತವಾಗಿದ್ದು ಅಂದಾಜು 2 ಸಾವಿರ ಸದಸ್ಯರು ಪಾಲ್ಗೊಳ್ಳುವ ಮೂಲಕ ರೋಟರಿಯ ಸಾಂಸ್ಕೃತಿಕ ವಿನಿಮಯಕ್ಕೆ ಸಾಕ್ಷಿಯಾಗಲಿದ್ದಾರೆ ಎಂದೂ ಪ್ರಕಾಶ್ ಕಾರಂತ್ ಹೇಳಿದರು.
ರೋಟರಿ ಮಿಸ್ಟಿ ಹಿಲ್ಸ್ ಕಾಯ೯ಯೋಜನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಕಾರಂತ್, ಗ್ಲೋಬಲ್ ಗ್ರ್ಯಾಂಟ್ ಯೋಜನೆಯಡಿಯಲ್ಲಿ ಕೊಡಗಿನ ಸಕಾ೯ರಿ ಶಾಲೆಗಳ ವಿದ್ಯಾಥಿ೯ಗಳಿಗೆ ವಿಜ್ಞಾನ ವಿಚಾರದ ಮಾಹಿತಿ ನೀಡುವ ನಿಟ್ಟಿನಲ್ಲಿ ವಿಜ್ಞಾನ ವಾಹಿನಿಯ 3 ವಾಹನಗಳನ್ನು ಬಳಸಿ ಪರಿಣಾಮಕಾರಿಯಾಗಿ ಮಿಸ್ಟಿ ಹಿಲ್ಸ್ ಶೈಕ್ಷಣಿಕ ಯೋಜನೆ ಜಾರಿಗೊಳಿಸುತ್ತಿದೆ ಎಂದು ಶ್ಲಾಘಿಸಿದರು.
ವಿದ್ಯಾಸಿರಿ, ವನಸಿರಿ, ಜಲಸಿರಿ, ಆರೋಗ್ಯ ಸಿರಿ ಎಂಬ ನಾಲ್ಕು ಮಹತ್ವದ ಜಿಲ್ಲಾ ಯೋಜನೆಗಳನ್ನು ಮಿಸ್ಟಿ ಹಿಲ್ಸ್ ಸಂಸ್ಥೆಯು ಅತ್ಯುತ್ತಮವಾಗಿ ಜಾರಿಗೊಳಿಸುತ್ತಿದ್ದು ಜನಪರ ಕಾಳಜಿಯ ಸಂಸ್ಥೆಯಾಗಿ ಹೊರಹೊಮ್ಮಿದೆ ಎಂದೂ ಗವನ೯ರ್ ಪ್ರಕಾಶ್ ಕಾರಂತ್ ಮೆಚ್ಚುಗೆ ವ್ಯಕ್ತಪಡಿಸಿದರು.
ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಸಾದ್ ಗೌಡ, ಕಾಯ೯ದಶಿ೯ ಪ್ರಮೋದ್ ಕುಮಾರ್ ರೈ, ಸಹಾಯಕ ಗವನ೯ರ್ ರತನ್ ತಮ್ಮಯ್ಯ, ಜಿಲ್ಲಾ ರೋಟರಿ ಪಬ್ಲಿಕ್ ಇಮೇಜ್ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ, ಜಿಲ್ಲಾ ರೋಟರಿ ಸೇನಾನಿ ಅವಿಲ್ ಮೆನೇಜಸ್ ಸುದ್ದಿಗೋಷ್ಟಿಯಲ್ಲಿ ಹಾಜರಿದ್ದರು.