ಸೋಮವಾರಪೇಟೆ ಜ.18 : ಮಕ್ಕಳ ಕಲಿಕೆಯಲ್ಲಿ ಶಿಕ್ಷಕರೊಂದಿಗೆ ಪೋಷಕರ ಜವಾಬ್ದಾರಿಯೂ ಮುಖ್ಯ ಎಂದು ವ್ಯಕ್ತಿತ್ವ ವಿಕಸನ ಮಾರ್ಗದರ್ಶಕ ಹಾಗೂ ಅಂತಾರಾಷ್ಟ್ರೀಯ ಅಥ್ಲೇಟ್ ತೀತಮಾಡ ಅರ್ಜುನ್ ದೇವಯ್ಯ ಹೇಳಿದರು.
ಕೊಡಗು ವಿಕಸನ ಸಂಸ್ಥೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ವಿಶ್ವ ಮಾನವ ಕುವೆಂಪು ವಿದ್ಯಾಸಂಸ್ಥೆಯಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಪರೀಕ್ಷಾ ಸಿದ್ದತೆ ಮಾರ್ಗದರ್ಶನ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು.
ಮಕ್ಕಳಿಗೆ ಮನೆಯಲ್ಲಿ ಒಳ್ಳೆಯ ವಾತಾವರಣ ಇದ್ದರೆ ಮಾತ್ರ ಕಲಿಕೆಗೆ ಆಸಕ್ತಿ ಇರುತ್ತದೆ. ಇದರೊಂದಿಗೆ ಆತ್ಮವಿಶ್ವಾಸ ಮತ್ತು ಏಕಾಗ್ರತೆ ವಿದ್ಯಾರ್ಥಿ ಜೀವನದಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ. ಎಲ್ಲಾ ಮಕ್ಕಳಲ್ಲೂ ಅಗಾಧವಾದ ಪ್ರತಿಭೆ ಇದ್ದೇ ಇರುತ್ತದೆ. ಆದರೆ ವಿದ್ಯಾರ್ಥಿ ಜೀವನದಲ್ಲಿ ಕೆಲವೊಮ್ಮೆ ಮಾರ್ಗದರ್ಶನದ ಕೊರತೆ ಸಾಧನೆಯ ಹಾದಿಗೆ ಅಡ್ಡ ಬರುತ್ತದೆ. ಇಂತಹ ಸಂದರ್ಭದಲ್ಲಿ ಯಾರೂ ವಿಚಲಿತರಾಗುವ ಅವಶ್ಯಕತೆಯಿಲ್ಲ. ಸಾಧನೆಗೆ ವಯಸ್ಸು ಎಂದಿಗೂ ಅಡ್ಡಿಯಾಗುವುದಿಲ್ಲ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ.ಸುರೇಶ್, ಪಠ್ಯದ ಪ್ರತಿಯೊಂದು ವಿಷಯಗಳನ್ನು ವಿದ್ಯಾರ್ಥಿಗಳು ಆಸಕ್ತಿಯಿಂದ ಕಲಿಯುವಂತಾಗಬೇಕು. ವಿದ್ಯಾರ್ಥಿಗಳು ಶ್ರದ್ದೆಯಿಂದ ಅಭ್ಯಾಸ ಮಾಡಿದರೆ ಉತ್ತಮ ಅಂಕಗಳನ್ನು ಪಡೆಯಲು ಸಾಧ್ಯವಿದೆ. ಮಾರ್ಗದರ್ಶನ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಕಲಿಕಾ ಆಸಕ್ತಿಗೆ ಪ್ರೇರೇಪಣೆ ಮಾಡುತ್ತದೆ ಎಂದರು.
ವಿದ್ಯಾಸಂಸ್ಥೆಯ ಬಾತ್ಮೀದಾರ ಕೆ.ಎಂ.ಜಗದೀಶ್ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಹಾಗೂ ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯದಲ್ಲಿ ಹೆಚ್ಚು ಅಧ್ಯಯನ ಮಾಡಲು ಮುಂದಿನ ಶೈಕ್ಷಣಿಕ ಸಾಲಿನಿಂದ ಕುವೆಂಪು ವಿದ್ಯಾಸಂಸ್ಥೆಯಲ್ಲಿ ಪಿಯುಸಿಯಲ್ಲಿ ವಿಜ್ಞಾನ ವಿಭಾಗನವನ್ನು ಪ್ರಾರಂಬಿಸಲಾಗುವುದು ಎಂದರು.
ವೇದಿಕೆಯಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ಮಿಲ್ಡ್ರೆಡ್ ಗೋನ್ಸಾಲ್‍ವೇಸ್, ಸಿಆರ್‍ಪಿ ಪ್ರೇಮ, ಕೊಡಗು ವಿಕಸನ ಸಂಸ್ಥೆಯ ಕಿಶೋರ್ ರೈ ಕತ್ತಲೆಕಾಡು ಹಾಜರಿದ್ದರು.