ಮಡಿಕೇರಿ ಜ.18 : ಕುಶಾಲನಗರ ವಲಯ ಅರಣ್ಯ ವ್ಯಾಪ್ತಿಯ ಮಾಲ್ದಾರೆ ಗ್ರಾಮದ ಅವರೆಗುಂದದಲ್ಲಿ ನಿತ್ರಾಣಗೊಂಡಿದ್ದ ಹುಲಿಯೊಂದನ್ನು ರಕ್ಷಿಸುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಸೆರೆಯಾದ ಹುಲಿಯನ್ನು ಮೈಸೂರು ಬಳಿಯ ಕೂರ್ಗಳ್ಳಿಗೆ ಸ್ಥಳಾಂತರಿಸಲಾಗಿದೆ.
12 ವರ್ಷದ ಹುಲಿ ಕಳೆದ ಕೆಲವು ದಿನಗಳ ಹಿಂದೆ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿತ್ತು. ಈ ಹುಲಿಯ ಮೇಲೆ ನಿಗಾ ಇರಿಸಿದ್ದ ಅರಣ್ಯ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡು ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು.
ಮಾಲ್ದಾರೆ ಗ್ರಾಮದ ಆಸ್ತಾನ ಕೆರೆಯ ಬಳಿ ಸಾಕಾನೆಗಳಾದ ಪ್ರಶಾಂತ್, ಸುಗ್ರೀವ, ಶ್ರೀರಾಮ, ವಿಕ್ರಮ, ಹರ್ಷ, ಈಶ್ವರ ಸಹಯೋಗದೊಂದಿಗೆ ಅರಣ್ಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು.
ವೈದ್ಯಾಧಿಕಾರಿ ಡಾ.ರಮೇಶ್ ಹಾಗೂ ಕುಶಾಲನಗರ ಉಪವಲಯ ಅರಣ್ಯಾಧಿಕಾರಿ ಕನ್ನಂಡ ರಂಜನ್ ಅರವಳಿಕೆ ಪ್ರಯೋಗಿಸಿದರು. ಆಹಾರ ಸೇವಿಸದೆ ನಿತ್ರಾಣಗೊಂಡಿದ್ದ ಹುಲಿಗೆ ವೈದ್ಯಾಧಿಕಾರಿ ಡಾ.ಚೆಟ್ಟಿಯಪ್ಪ ಹಾಗೂ ಡಾ.ರಮೇಶ್ ಚಿಕಿತ್ಸೆ ನೀಡಿದರು. ನಂತರ ಹುಲಿಯನ್ನು ಕೂರ್ಗಳ್ಳಿಗೆ ಸ್ಥಳಾಂತರಿಸಲಾಯಿತು.
ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್.ಮೂರ್ತಿ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿಎಫ್ಓ ಎಂ.ಟಿ.ದೇವಯ್ಯ, ಎಸಿಎಫ್ ಎ.ಎ.ಗೋಪಾಲ, ಕುಶಾಲನಗರ ವಲಯ ಅರಣ್ಯಾಧಿಕಾರಿ ಕೆ.ವಿ.ಶಿವರಾಂ, ತಿತಿಮತಿ ಆರ್ಎಫ್ಓ ಅಶೋಕ್, ವಿರಾಜಪೇಟೆ ಆರ್ಎಫ್ಓ ದೇವಯ್ಯ ಪಾಲ್ಗೊಂಡಿದ್ದರು.
ಸೆರೆಹಿಡಿದ ಹುಲಿಗೆ ಕೂರ್ಗಳ್ಳಿಯಲ್ಲಿ ಆರೈಕೆ ಮಾಡಿದ ನಂತರ ಮೈಸೂರಿನ ಮೃಗಾಲಯಕ್ಕೆ ಬಿಡಲಾಗುವುದೆಂದು ಕುಶಾಲನಗರ ವಲಯ ಅರಣ್ಯ ಅಧಿಕಾರಿ ಶಿವರಾಂ ತಿಳಿಸಿದರು.