ಮಡಿಕೇರಿ, NEWS DESK ನ.26: ರಾಜರ ಆಳ್ವಿಕೆಯ ಕಾಲದಿಂದಲೂ ಪುತ್ತರಿ ಹಬ್ಬದ ಮರುದಿನ ನಡೆದುಕೊಂಡು ಬರುತ್ತಿರುವ ಸಾಂಪ್ರದಾಯಿಕ ‘ಪುತ್ತರಿ ಅರಮನೆ ಕೋಲ್’ ಗುರುವಾರ ನಗರದ ಕೋಟೆ ಆವರಣದಲ್ಲಿ ಸಂಭ್ರಮದಿಂದ ನಡೆಯಿತು. ಕೊಡಗಿನ ನೆಲದ ಸೊಗಡನ್ನು ಪ್ರತಿಬಿಂಬಿಸುವ ವಿವಿಧ ಜಾನಪದ ನೃತ್ಯ ಪ್ರಕಾರಗಳ ಪ್ರದರ್ಶನ ನೆರೆದಿದ್ದ ಜನರ ಮನಸೂರೆಗೊಂಡಿತು.
ಸಾಂಪ್ರದಾಯಿಕ ಉಡುಪಿನಲ್ಲಿ ದುಡಿಯ ನಾದಕ್ಕೆ ತಕ್ಕಂತೆ ಹೆಜ್ಜೆ ಹಾಕಿದ ಪಾಂಡೀರ ಕುಟುಂಬಸ್ಥರು ಪುತ್ತರಿ ಕೋಲಾಟ ಹಾಗೂ ಬೊಳಕಾಟ್ ಪ್ರದರ್ಶಿಸಿದರು. ಪಾಂಡೀರ ಕುಟುಂಬದ ಮಹಿಳಾ ಸದಸ್ಯರು ನಡೆಸಿಕೊಟ್ಟ ಉಮ್ಮತ್ತಾಟ್ ವಿಶೇಷ ಗಮನ ಸೆಳೆಯಿತು. ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರವರೆಗೆ ವಿವಿಧ ನೃತ್ಯ ಪ್ರಕಾರಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಮಡಿಕೇರಿ ಕೊಡವ ಸಮಾಜದ ತಂಡಗಳಿಂದ ಉಮ್ಮತ್ತಾಟ್, ಬೊಳಕಾಟ್, ಕೋಲಾಟ್ ಹಾಗೂ ಪರೆಯಕಳಿ ಪ್ರದರ್ಶನಗೊಂಡು ಕೊಡಗಿನ ಶ್ರೀಮಂತ ಸಾಂಸ್ಕೃತಿಕ ವೈಭವ ಅನಾವರಣಗೊಂಡಿತು.
ಕೋಲಾಟಕ್ಕೂ ಮೊದಲು ಶ್ರೀ ಓಂಕಾರೇಶ್ವರ ದೇವಸ್ಥಾನ ಹಾಗೂ ಕೋಟೆ ಶ್ರೀ ಗಣಪತಿ ದೇವಸ್ಥಾನದಲ್ಲಿ ಪಾಂಡೀರ ಕುಟುಂಬಸ್ಥರು, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮತ್ತು ಕೊಡವ ಸಮಾಜದ ಪ್ರಮುಖರು ವಿಶೇಷ ಪೂಜೆ ಸಲ್ಲಿಸಿದರು.
ಕೊಡಗನ್ನು ಆಳಿದ ಹಾಲೇರಿ ವಂಶಸ್ಥರ ಆಡಳಿತಾವಧಿಯಲ್ಲಿ ಪುತ್ತರಿ ಹಬ್ಬದ ಸಂಭ್ರಮದೊಂದಿಗೆ ಈ ನೆಲದ ಸಂಸ್ಕೃತಿಗೆ ವಿಶೇಷ ಒತ್ತು ನೀಡಿ ಅರಮನೆ ಕೋಲ್ ಆಚರಿಸಲಾಗುತ್ತಿತ್ತು. ಧಾನ್ಯಲಕ್ಷ್ಮಿಯನ್ನು ಮನೆ ತುಂಬಿಸಿಕೊಳ್ಳುವ ಹುತ್ತರಿ ಹಬ್ಬದ ಹಿನ್ನೆಲೆಯಲ್ಲಿ ಹಾಲೇರಿ ರಾಜವಂಶಸ್ಥ ಲಿಂಗರಾಜೇಂದ್ರರ ಆಡಳಿತಾವಧಿಯಲ್ಲಿ ಕೋಟೆ ಆವರಣದಲ್ಲಿ ಹುತ್ತರಿಯ ಮರುದಿನ ನಾಡಿನ ಜನತೆಯ ಸಮ್ಮುಖದಲ್ಲಿ ಕೋಲಾಟ ನಡೆಯುತ್ತಿತ್ತು.
ರಾಜರ ಆಳ್ವಿಕೆಯ ಅಂತ್ಯದ ಬಳಿಕ ಈ ಪದ್ಧತಿ ಕಾಲಕ್ರಮೇಣ ಸ್ಥಗಿತಗೊಂಡಿತ್ತು. ರಾಜರ ಕಾಲದಲ್ಲಿ ಕೋಲಾಟ ನಡೆಸುತ್ತಿದ್ದ ಪಾಂಡೀರ ಕುಟುಂಬಸ್ಥರ ಸಹಕಾರದೊಂದಿಗೆ ಮತ್ತೆ ಕೋಟೆ ಆವರಣದಲ್ಲಿ ಪುತ್ತರಿ ಕೋಲಾಟವನ್ನು ಆರಂಭಿಸಲಾಗಿದ್ದು, ಇದೀಗ ಪ್ರತಿವರ್ಷ ಈ ಕಾರ್ಯಕ್ರಮ ಸಂಪ್ರದಾಯಬದ್ಧವಾಗಿ ನಡೆಯುತ್ತಿದೆ.
ಶ್ರೀ ಓಂಕಾರೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಪ್ಪನೆರವಂಡ ಚುಮ್ಮಿ ದೇವಯ್ಯ ದೀಪ ಬೆಳಗಿಸುವ ಮೂಲಕ ಪುತ್ತರಿ ಕೋಲಾಟ್ಗೆ ಚಾಲನೆ ನೀಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ, ಪಾಂಡೀರ ಕುಟುಂಬದ ಪಟ್ಟೆದಾರ ಮಣಿ ಕಾಳಪ್ಪ, ಅಧ್ಯಕ್ಷ ಪಾಂಡೀರ ನವೀನ್ ಅಯ್ಯಣ್ಣ, ಚೆಟ್ಟಿರ ಮನು ಮಾದಪ್ಪ, ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ರಮೇಶ್ ಹೊಳ್ಳ, ಪಾಂಡೀರ ಕುಟುಂಬಸ್ಥರು ಹಾಗೂ ಕೊಡವ ಸಮಾಜದ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.


































