ಮಡಿಕೇರಿ ಜ.18 : ಶ್ರೀ ರಾಮಚಂದ್ರಪುರ ಮಠದ ಅಧೀನದಲ್ಲಿರುವ ಸಂಪಾಜೆಯ ಜೇಡ್ಲದಲ್ಲಿನ ಗೋಪಾಲಕೃಷ್ಣ ದೇವಕಿ ಪಶು ಸಂಗೋಪನಾ ಕೇಂದ್ರದಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ಗೋವುಗಳ ಆರೋಗ್ಯ ಸುಧಾರಣೆ ಹಾಗೂ ಗ್ರಾಮದ ಕ್ಷೇಮಾಭಿವೃದ್ಧಿಗೆ ಪ್ರಾರ್ಥಿಸಿ ಗೋಪೂಜೆ ಮತ್ತು ಗೋವುಗಳ ಕಿಚ್ಚು ಹಾಯಿಸುವ ವಿನೂತನ ಕಾರ್ಯಕ್ರಮ ನಡೆಯಿತು.
ಬಯಲುಸೀಮೆಯಲ್ಲಿ ಚಿರಪರಿಚಿತವಾಗಿದ್ದ ಸುಗ್ಗಿಹಬ್ಬದ ಈ ಕಾರ್ಯಕ್ರಮವನ್ನು ಪ್ರಥಮ ಬಾರಿಗೆ ಆಚರಿಸಲಾಯಿತು. ಸರಳವಾಗಿ ಅಲಂಕರಿಸಿದ್ದ ಗೋವುಗಳನ್ನು ಮೆರವಣಿಗೆ ಮೂಲಕ ಕಾರ್ಯಕ್ರಮಕ್ಕೆ ಕರೆತರಲಾಯಿತು.
ಸುಳ್ಯದ ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ನಿತಿನ್ ಪ್ರಭು ಕಾರ್ಯಕ್ರಮ ಉದ್ಘಾಟಿಸಿ ಗೋವುಗಳನ್ನು ಕಿಚ್ಚು ಹಾಯಿಸುವದರ ಪ್ರಾಮುಖ್ಯತೆ ಹಾಗೂ ಇದರ ಹಿಂದೆ ಇರುವ ವೈಜ್ಞಾನಿಕ ಕಾರಣವನ್ನು ವಿವರಿಸಿದರು.
ಗೋಶಾಲೆಯ ಪ್ರಧಾನ ಕಾರ್ಯದರ್ಶಿ ವಿಜಯಕೃಷ್ಣ ಕಬ್ಬಿನಗದ್ದೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಲ್ಲುಗುಂಡಿಯ ವೈದ್ಯರಾದ ಡಾ.ಜಯರಾಮ್ ಭಟ್ ಗೋಬಂಧು ಯೋಜನೆಯನ್ನು ಬಿಡುಗಡೆಗೊಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೋಶಾಲೆಯ ಕಾರ್ಯಾಧ್ಯಕ್ಷ ಡಾ.ರಾಜಾರಾಮ್ ಅಖಿಲಾತಿ ವಹಿಸಿದ್ದರು. ಸಂಪಾಜೆ ಗ್ರಾ.ಪಂ ಅಧ್ಯಕ್ಷೆ ನಿರ್ಮಲಾ ಭರತ್ ಪಾಲ್ಗೊಂಡಿದ್ದರು.
ನಿರಂತರ ಗೋಸೇವೆಯಲ್ಲಿ ತೊಡಗಿಸಿಕೊಂಡಿರುವ ನಾಲ್ವರು ಗೋಪ್ರೇಮಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು.
ಗೋವುಗಳನ್ನು ಕಿಚ್ಚು ಹಾಯಿಸಿ ನಂತರ ಗೋಪೂಜೆ ನೆರವೇರಿಸಿ ಗೋವುಗಳಿಗೆ ಬೆಲ್ಲವನ್ನು ತಿನ್ನಿಸಲಾಯಿತು. ಗವ್ಯಾಧಾರಿತ ಗೊಬ್ಬರವನ್ನು ಈ ಸಂದರ್ಭ ಬಿಡುಗಡೆಗೊಳಿಸಲಾಯಿತು. ಕೊಡಗು, ಸುಳ್ಯ, ಗುತ್ತಿಗಾರು, ಈಶ್ವರಮಂಗಲ ಹವ್ಯಕ ವಲಯದ ಅಧ್ಯಕ್ಷರು , ಗುರಿಕ್ಕಾರರು, ಪದಾಧಿಕಾರಿಗಳು, ಗೋಪ್ರೇಮಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಗೋಶಾಲೆಯ ಕೋಶಾಧಿಕಾರಿ ಈಶ್ವರಕುಮಾರ ಉಬರಡ್ಕ ಸ್ವಾಗತಿಸಿದರು.