ನಾಪೋಕ್ಲು ಜ.19 : ರಾಷ್ಟ್ರದ ಭರವಸೆಯ ಕ್ರೀಡಾಪಟು ಕೊಡಗು ಜಿಲ್ಲೆಯ ಪಾಲೂರು ಗ್ರಾಮದ ಸೂದನ ಎಸ್. ಡಾಲಿ ಅಂತರಾಷ್ಟ್ರೀಯ ಮಟ್ಟದ ಮಾಸ್ಟರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿ ರಾಷ್ಟ್ರಕ್ಕೆ ಕೀರ್ತಿಯನ್ನು ತಂದಿದ್ದಾರೆ.
ಜ.11 ರಿಂದ 15 ರವರೆಗೆ ಶ್ರೀಲಂಕಾದ ಸುಗತಾದಾಸ ಕ್ರೀಡಾಂಗಣದಲ್ಲಿ ನಡೆದ 800 ಮತ್ತು 1500 ಮೀ.ಸ್ಟಿಪಲ್ ಚೇಸ್ ಓಟದ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಹಾಗೂ 3000 ಮೀ. ಸ್ಟಿಪಲ್ ಚೇಸ್ ಓಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿ ಸಾಧನೆ ಮಾಡಿ ಪ್ರಸಂಸೆಗೆ ಪಾತ್ರರಾಗಿದ್ದಾರೆ.
ಈ ಹಿಂದೆ ಮೈಸೂರು ವಿಶ್ವವಿದ್ಯಾನಿಲಯದ ಓವಲ್ ಕ್ರೀಡಾಂಗಣದಲ್ಲಿ ನಡೆದ 42ನೇ ರಾಜ್ಯಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಕೊಡಗಿನ ಮಾಸ್ಟರ್ ಅಸೋಸಿಯೇಷನ್ 15 ಕ್ರೀಡಾಪಟುಗಳು ಭಾಗವಹಿಸಿ ಚಿನ್ನ ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಪಡೆಯುವ ಮೂಲಕ ಸಾಧನೆ ಮಾಡಿದ್ದರು.
ಈ ಕ್ರೀಡಾಪಟುಗಳಲ್ಲಿ ಸೂದನ ಎಸ್ ಡಾಲಿ ಒಬ್ಬರು 800 ಮೀಟರ್, 1500ಮೀಟರ್ ಹಾಗೂ 5000 ಮೀಟರ್ ಓಟದ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಚಿನ್ನದ ಪದಕವನ್ನು ಗಳಿಸಿದ್ದು ಜಿಲ್ಲೆಗೆ ಕೀರ್ತಿ ತಂದಿದ್ದರು.
ಇವರು 2021 ಫೆಬ್ರವರಿಯಲ್ಲಿ ವೆಸ್ಟ್ ಬೆಂಗಾಲ್ ನ ಕೊಲ್ಕತ್ತಾದಲ್ಲಿ ನಡೆದ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಸಾಧನೆ ಮಾಡಿದ್ದಾರೆ.
ಉಡುಪಿಯಲ್ಲಿ ಡಿ.9 ಮತ್ತು 10 ರಂದು ಸೌತ್ ಇಂಡಿಯಾ ಕ್ರೀಡಾಕೂಟ ನಡೆದಿದ್ದು ಈ ಕ್ರೀಡಾಕೂಟದಲ್ಲಿ ಭಾಗವಹಿದ್ದಲ್ಲದೆ. ಇದೀಗ ಶ್ರೀಲಂಕಾದಲ್ಲಿ ನಡೆದ ಮಾಸ್ಟರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಪ್ರಶಸ್ತಿ ಗಳಿಸಿದ್ದಾರೆ.
ಸೂದನ ಎಸ್.ಡಾಲಿ ಸಣ್ಣ ಕೃಷಿಕ ಸೂದನ ಪೂವಮ್ಮ ಮತ್ತು ದಿವಂಗತ ಸೋಮಪ್ಪನವರ ಮಗನಾಗಿದ್ದು, ಪತ್ನಿ ರಜನಿ (ಕುರುಂಜಿ) ಮತ್ತು ಮಗ ಗವೀನ್ ಮಗಳು ಘನಸ್ವಿ ರೊಂದಿಗೆ ಪಾಲೂರು ನಲ್ಲಿ ವಾಸವಾಗಿದ್ದಾರೆ.
ವರದಿ — ದುಗ್ಗಳ ಸದಾನಂದ.