ಮಡಿಕೇರಿ ಜ.19 : ಬೂತ್ ಮಟ್ಟದಿಂದ ಪಕ್ಷವನ್ನು ಬಲಗೊಳಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಬಿಜೆಪಿ ವತಿಯಿಂದ ಜ.21 ರಿಂದ 29ರ ವರೆಗೆ ಬೂತ್ ವಿಜಯ ಸಂಕಲ್ಪ ಅಭಿಯಾನ ನಡೆಯಲಿದೆ. ಪ್ರತಿಮನೆಯನ್ನು ಬಿಜೆಪಿ ಮನೆಯನ್ನಾಗಿಸುವುದು ನಮ್ಮ ಗುರಿಯಾಗಿದೆ ಎಂದು ಬಿಜೆಪಿಯ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಬಿಜೆಪಿ ಕಾರ್ಯಕರ್ತರ ಮನೆ ಮೇಲೆ ಪಕ್ಷದ ಧ್ವಜ ಹಾರಿಸುವ ಮೂಲಕ ಒಂದನೇ ಹಂತದ ಅಭಿಯಾನವನ್ನು ಪೂರ್ಣಗೊಳಿಸಲಾಗಿದೆ. ಎರಡನೇ ಹಂತದ ಅಭಿಯಾನಕ್ಕೆ ಜ.21 ರಂದು ಚಾಲನೆ ದೊರೆಯಲಿದೆ ಎಂದರು.
9 ದಿನಗಳವರೆಗೆ ನಡೆಯಲಿರುವ ಅಭಿಯಾನದಲ್ಲಿ ಒಂದು ಕೋಟಿ ಸದಸ್ಯರನ್ನು ನೋಂದಾಯಿಸುವ ಗುರಿ ಹೊಂದಲಾಗಿದ್ದು, ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರದ ಸಾಧನೆಗಳನ್ನು 543 ಬೂತ್‍ಗಳಲ್ಲಿಯೂ ಪರಿಣಾಮಕಾರಿಯಾಗಿ ಜನರಿಗೆ ತಲುಪಿಸಲಾಗುವುದು ಎಂದು ತಿಳಿಸಿದರು.
ಸರ್ಕಾರದ ಯೋಜನೆಯನ್ನು ಪ್ರತಿಬೂತ್‍ನಲ್ಲಿ 10 ಗೋಡೆ ಬರಹಗಳ ಮೂಲಕ ಗಮನ ಸೆಳೆಯುವುದು, ಎಲ್ಲಾ ಬೂತ್‍ಗಳಲ್ಲಿ ಈಗಾಗಲೇ ವಾಟ್ಸ್‍ಅಪ್ ಗ್ರೂಪ್ ತಯಾರಿಸಿ ಡಿಜಿಟಲ್ ಸಂಪರ್ಕ ಹೊಂದುವುದು, ಮನೆಗಳ ಮೇಲೆ ಮತ್ತು ವಾಹನಗಳ ಮೇಲೆ ಸ್ಟಿಕ್ಕರ್ ಅಂಟಿಸುವ ಕಾರ್ಯಕ್ರಮ, ಕರಪತ್ರ ವಿತರಣೆ, ಫಲಾನುಭವಿಗಳ ಸಂಪರ್ಕ, ಪ್ರತಿ ಬೂತ್‍ನಲ್ಲೂ ಮನ್ ಕೀ ಬಾತ್ ಕಾರ್ಯಕ್ರಮವನ್ನು ಕೇಳಲು ವ್ಯವಸ್ಥೆ ಕಲ್ಪಿಸುವುದು, ಕಾರ್ಯಕರ್ತರ ಪಡೆಯೊಂದಿಗೆ ಕಟ್ಟಕಡೆಯ ಮನೆಯನ್ನು ತಲುಪುವುದು, ಪಕ್ಷಕ್ಕೆ ಸಮಾಜದ ವಿವಿಧ ವರ್ಗಗಳನ್ನು ಸೇರ್ಪಡೆ ಮಾಡಿಕೊಳ್ಳುವುದು, ಕಾರ್ಯಕ್ರಮದ ಮೂಲಕ ರಾಜಕೀಯ ಸ್ಥಿರತೆ, ಸಂಘಟನಾ ಶಕ್ತಿ ಮತ್ತು ವೇಗವನ್ನು ತುಂಬುವುದು, 312 ಮಂಡಲಗಳಲ್ಲಿ ಕಾರ್ಯಕ್ರಮ ರೂಪಿಸುವುದು, 11 ಸಾವಿರ ಶಕ್ತಿ ಕೇಂದ್ರಗಳಲ್ಲಿ ಸಭೆಗಳ ಆಯೋಜನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಮೂಲಕ ಜಿಲ್ಲೆಯ ಎಲ್ಲಾ ಭಾಗಗಳಿಗೂ ಅಭಿಯಾನವನ್ನು ವಿಸ್ತರಿಸಲಾಗುವುದು.
ಎಲ್ಲಾ ಕಾರ್ಯಕ್ರಮಗಳಲ್ಲೂ ಮಂತ್ರಿಗಳು, ಶಾಸಕರು, ಲೋಕಸಭಾ ಸದಸ್ಯರು ಹಾಗೂ ವಿಧಾನ ಪರಿಷತ್ ಸದಸ್ಯರು ಪಾಲ್ಗೊಳ್ಳಲಿದ್ದಾರೆ. ಯಾವುದೇ ಚುನಾವಣೆಯನ್ನು ಎದುರಿಸುವ ಶಕ್ತಿ ಪಕ್ಷಕ್ಕಿದೆ ಎಂದು ರಾಬಿನ್ ದೇವಯ್ಯ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಬೂತ್ ವಿಜಯ ಸಂಕಲ್ಪ ಅಭಿಯಾನದ ಜಿಲ್ಲಾ ಸಂಚಾಲಕ ಡಾ.ಬಿ.ಸಿ.ನವೀನ್, ಸಹ ಸಂಚಾಲಕಿ ಯಮುನಾ ಚಂಗಪ್ಪ, ಮಾಧ್ಯಮ ವಕ್ತಾರ ಶಜಿಲ್ ಕೃಷ್ಣ ಹಾಗೂ ಜಿಲ್ಲಾ ಉಪಾಧ್ಯಕ್ಷ ಅರುಣ್ ಕುಮಾರ್ ಉಪಸ್ಥಿತರಿದ್ದರು.