ಮಡಿಕೇರಿ ಜ.19 : ಭಾರತೀಯ ಜನತಾ ಪಾರ್ಟಿ ಹಾಗೂ ಗ್ರಾಮಾಂತರ ವೃತ್ತಿಪರ ಪ್ರಕೋಷ್ಠದ ವತಿಯಿಂದ ಜ.22 ರಂದು ಮರಗೋಡಿನಲ್ಲಿ ಉಚಿತ ವೈದ್ಯಕೀಯ, ಶಸ್ತ್ರಚಿಕಿತ್ಸಾ ಮತ್ತು ದಂತ ಚಿಕಿತ್ಸಾ ಶಿಬಿರ ನಡೆಯಲಿದೆ ಎಂದು ಪ್ರಕೋಷ್ಠದ ಜಿಲ್ಲಾ ಸಂಚಾಲಕ ಮೋಹನ್ ಅಪ್ಪಾಜಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮರಗೋಡಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಶಿಬಿರ ನಡೆಯಲಿದ್ದು, ಬೆಳಗ್ಗೆ 10.30 ಗಂಟೆಗೆ ಶಿಬಿರಕ್ಕೆ ಚಾಲನೆ ದೊರೆಯಲಿದೆ ಎಂದು ತಿಳಿಸಿದರು.
ಶಿಬಿರದಲ್ಲಿ ಉಚಿತ ವೈದ್ಯಕೀಯ ದಂತ ತಜ್ಞರಿಂದ ಸಲಹೆ ಮತ್ತು ಚಿಕಿತ್ಸೆ ಹಾಗೂ ಸಮಾಲೋಚನೆ, ದಂತ ಆರೋಗ್ಯ ತಪಾಸಣೆ, ಶಸ್ತ್ರ ಚಿಕಿತ್ಸೆ, ಶ್ರವಣ ತಪಾಸಣಾ ಶಿಬಿರ, ಸಾಮಾನ್ಯ ವೈದ್ಯಕೀಯ ಚಿಕಿತ್ಸೆ, ಮೂತ್ರ ಶಾಸ್ತ್ರಜ್ಞರು ಹಾಗೂ ಸ್ತ್ರೀ ರೋಗ ತಜ್ಞರಿಂದ ಸಮಾಲೋಚನೆ, ಗಂಡು ಮತ್ತು ಹೆಣ್ಣು ಬಂಜೆತನ ಸಲಹೆಗಳು, ಫಲಾನುಭವಿಗಳಿಗೆ ಉಚಿತ ಲ್ಯಾಬ್ ಹಾಗೂ ಶಸ್ತ್ರ ಚಿಕಿತ್ಸೆಗಳು, ಮೂಲ ಔಷಧಿಗಳು, ರೋಗ ನಿರೋಧಕ ಪಾನೀಯ ನೀಡಲಾಗುವುದು ಎಂದರು.
ಫಲಾನುಭವಿಗಳು ಶಿಬಿರಕ್ಕೆ ಬರುವಾಗ ತಮ್ಮ ಆಧಾರ್‍ಕಾರ್ಡ್, ಹಳೆಯ ವೈದ್ಯಕೀಯ ವರದಿಗಳು ಇದ್ದಲ್ಲಿ ಹಾಗೂ ಕೋವಿಡ್ ವ್ಯಾಕ್ಸಿನೇಷಮ್ ಸರ್ಟಿಫಿಕೆಟ್ ಕಡ್ಡಾಯವಾಗಿ ತರುವಂತೆ ತಿಳಿಸಿದ ಮೋಹನ್ ಅಪ್ಪಾಜಿ, ಮರಗೋಡು ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಪ್ರಕೋಷ್ಠದ ಸಹಾಯಕ ಸಂಚಾಲಕರಾದ ಮನೋಜ್, ಮಂಜು, ಗುರುಕೃಷ್ಣ, ರಾಜೇಶ್ ಉಪಸ್ಥಿತರಿದ್ದರು.







