ಮಡಿಕೇರಿ ಜ.20 : ಕೊಡಗಿನಲ್ಲಿ ಈ ವರ್ಷ ಸುರಿದ ಭಾರಿ ಗಾಳಿ-ಮಳೆಯಿಂದಾಗಿ ನಾಪೋಕ್ಲು ನಾಲ್ಕುನಾಡು ವ್ಯಾಪ್ತಿಯಲ್ಲಿ ಕಾಫಿ, ಕಾಳು ಮೆಣಸು, ಅಡಿಕೆ ಸೇರಿದಂತೆ ಇನ್ನಿತರ ಫಸಲುಗಳು ಸಂಪೂರ್ಣ ನಾಶವಾಗಿದ್ದು, ಕೃಷಿ ಉತ್ಪನ್ನಗಳ ಬೆಲೆ ಏರಿಕೆ ಮತ್ತು ಕೂಲಿ ಕಾರ್ಮಿಕರ ದುಬಾರಿ ವೇತನದಿಂದ ಬೆಳೆಗರಾರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಬೆಳೆಗಾರರ ಸಾಲ ಮನ್ನಾ ಮಾಡಲು ಕ್ರಮ ಕೈಗೊಳ್ಳಬೇಕೆಂದು ನಾಲ್ಕುನಾಡು ಬೆಳೆಗಾರರ ಹೋರಾಟ ಸಮಿತಿಯ ಪದಾಧಿಕಾರಿಗಳು ಒತ್ತಾಯಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಲ್ಕುನಾಡು ಬೆಳೆಗಾರರ ಹೋರಾಟ ಸಮಿತಿ ಅಧ್ಯಕ್ಷ ಕುಂಡ್ಯೋಳಂಡ ರಮೇಶ್ ಮುದ್ದಯ್ಯ ಈ ವರ್ಷ ಸುರಿದ ಭಾರಿ ಗಾಳಿ ಮಳೆಯಿಂದ ನಾಲ್ಕುನಾಡು ವ್ಯಾಪ್ತಿಯಲ್ಲಿ ಅಪಾರ ಪ್ರಮಾಣದಲ್ಲಿ ಬೆಳೆ ನಾಶವಾಗಿದ್ದು, ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆ. ಅಲ್ಲದೆ ಜೀವನಾಂಶಕ ವಸ್ತುಗಳ ಬೆಲೆ ಏರಿಕೆ, ಕೂಲಿ ಕಾರ್ಮಿಕರ ದುಬಾರಿ ವೇತನ, ಬೆಳೆಗಳಿಗೆ ಬಳಸುವ ಕೀಟನಾಶಕ ಹಾಗೂ ರಸಗೊಬ್ಬರಗಳ ಬೆಲೆಯ ಸಬ್ಸಿಡಿ ಹೊರತಾಗಿಯೂ ಗಗನಕ್ಕೇರಿದೆ. ಪ್ರಸ್ತುತ ಫಸಲನ್ನು ತೆಗೆಯಲು ಕೂಲಿ ಕಾರ್ಮಿಕರು ಹೆಚ್ಚಿನ ವೇತನದ ಬೇಡಿಕೆ ಇಡುತ್ತಿದ್ದಾರೆ. ಕಳೆದ ಸಾಲಿಗಿಂತ ಕಾಫಿ, ಕಾಳು ಮೆಣಸು ಬೆಳೆಗಳು ಇಳುವರಿ ಕಮ್ಮಿಯಾಗಿದ್ದು ಬ್ಯಾಂಕ್ ಗಳಲ್ಲಿ ಮಾಡಿದ ಸಾಲ ತೀರಿಸಲು ಆಗದ ಪರಿಸ್ಥಿತಿ ಎದುರಾಗಿದೆ. ಇದರಿಂದ ಕಷ್ಟಪಟ್ಟು ಬೆಳೆದ ಬೆಳೆಗಾರರು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸರ್ಕಾರವು ಈಗಾಗಲೇ ಬೆಳೆ ನಷ್ಟ ಪರಿಹಾರವನ್ನು ನೀಡಿದ್ದು ಇದರಿಂದ ತಾತ್ಕಾಲಿಕ ಪರಿಹಾರ ಲಭಿಸಿದೆ. ಆದರೆ ಇದು ರೈತನ ಸಂಕಷ್ಟವನ್ನು ನೀಗಿಸುವಷ್ಟಿಲ್ಲ, ಬೆಳೆಗಾರರು ಸಾಲಬಾದೆಯಿಂದ ಸಂಕಷ್ಟದಲ್ಲಿರುವುದರ ಬಗ್ಗೆ ಮಾನ್ಯ ಶಾಸಕರಾದ ಕೆ.ಜಿ ಬೋಪಯ್ಯ ಅವರ ಗಮನಕ್ಕೆ ತರಲಾಗಿದ್ದು ಇದರ ಬಗ್ಗೆ ಸರ್ಕಾರದ ಗಮನ ಸೆಳೆಯುವುದಾಗಿಯೂ ಮತ್ತು ಮುಂದಿನ ಬಜೆಟ್ ನ ಪೂರ್ವಭಾವಿ ಸಭೆಯಲ್ಲಿ ಪ್ರಸ್ತಾಪ ಮಾಡುವುದಾಗಿಯೂ ಶಾಸಕರು ಭರವಸೆ ನೀಡಿದ್ದಾರೆ ಎಂದು ರಮೇಶ್ ಮುದ್ದಯ್ಯ ತಿಳಿಸಿದರು.
ಆದ್ದರಿಂದ ಸರ್ಕಾರವು ಸಂಕಷ್ಟ ಅನುಭವಿಸುತ್ತಿರುವ ಬೆಳೆಗಾರರ ಸಂಪೂರ್ಣ ಸಾಲ ಮನ್ನಾ ಮಾಡಿ ಬೆಳೆಗಾರರನ್ನು ರಕ್ಷಿಸಬೇಕೆಂದು ರಮೇಶ್ ಮುದ್ದಯ್ಯ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ನಾಲ್ಕುನಾಡು ಬೆಳೆಗಾರರ ಸಮಿತಿಯ ಕಾರ್ಯದರ್ಶಿ ಎನ್.ಎಸ್.ಉದಯಶಂಕರ್, ಸದಸ್ಯರಾದ ಬಿದ್ದಾಟಂಡ ಜಿನ್ನುನಾಣಯ್ಯ, ಚಿಯಕಪೂವಂಡ ಅಪ್ಪಚ್ಚು, ಪಾಡಿಯಮ್ಮಂಡ ಮನು ಮಹೇಶ್, ಕುಲ್ಲೇಟಿರ ಅಜಿತ್ ನಾಣಯ್ಯ, ಮುಕ್ಕಾಟಿರ ವಿನಯ್, ಕಂಗಾಂಡ ಜಾಲಿ ಪೂವಪ್ಪ, ಬೊಪ್ಪಂಡ ಕವನ್, ಶಿವಚಾಳಿಯಂಡ ಜಗದೀಶ್ ಉಪಸ್ಥಿತರಿದ್ದರು.
ವರದಿ :ಝಕರಿಯ ನಾಪೋಕ್ಲು