ಮಡಿಕೇರಿ ಜ.20 : ಗ್ರಾಮೀಣ ಪ್ರದೇಶದ ಹಾಕಿ ಕ್ರೀಡೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ವಿ.ಬಾಡಗ ಹೈ ಫ್ಲೈಯರ್ಸ್ ತಂಡದ ವತಿಯಿಂದ ಫೆ.22 ರಿಂದ 26ರ ವರೆಗೆ ಪ್ರಥಮ ವರ್ಷದ ಕೊಡವ ಕೌಟುಂಬಿಕ ಹಾಕಿ ಉತ್ಸವ ನಡೆಯಲಿದೆ ಎಂದು ಕ್ರೀಡಾ ಸಮಿತಿ ಕಾರ್ಯದರ್ಶಿ ಮಚ್ಚಾರಂಡ ಪ್ರವೀಣ್ ತಿಮ್ಮಯ್ಯ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿ.ಬಾಡಗ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಪಂದ್ಯಾವಳಿ ನಡೆಯಲಿದ್ದು, ವಿರಾಜಪೇಟೆ ತಾಲೂಕಿನ ಬೇರಳಿನಾಡು, ಕುತ್ತುನಾಡು ಮತ್ತು ಬೊಟ್ಟಿಯತ್‍ನಾಡು ವ್ಯಾಪ್ತಿಯಲ್ಲಿ ಐನ್‍ಮನೆ ಹೊಂದಿರುವ ಕೊಡವ ಕುಟುಂಬಗಳಿಗೆ ಮಾತ್ರ ಪಂದ್ಯಾವಳಿ ಸೀಮಿತವಾಗಿದೆ ಎಂದು ಮಾಹಿತಿ ನೀಡಿದರು.
ಪಾಲ್ಗೊಳ್ಳುವ ತಂಡದಲ್ಲಿ ತಲಾ 4 ಜನ ಕೊಡವ ಅತಿಥಿ ಆಟಗಾರರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ವಿಜೇತ ತಂಡಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನದ ಆಕರ್ಷಕ ನಗದು ಹಾಗೂ ಪಾರಿತೋಷಕ ವಿತರಿಸಲಾಗುವುದು. ಪಂದ್ಯಾವಳಿಗೆ ಪಾಲ್ಗೊಳ್ಳುವ ತಂಡಗಳು ಫೆ.10ರ ಒಳಗಾಗಿ ಪ್ರವೇಶ ಶುಲ್ಕ ರೂ.1500 ಪಾವತಿಸಿ ತಂಡದ ಹೆಸರನ್ನು ನೋಂದಯಿಸಿಕೊಳ್ಳುವಂತೆ ಮನವಿ ಮಾಡಿದರು.
ಪಂದ್ಯಾವಳಿಯು ಹಾಕಿ ಕೂರ್ಗ್ ಸಂಸ್ಥೆಯ ಸಹಯೋಗದಲ್ಲಿ ನಡೆಯಲಿದ್ದು, ಹಾಕಿ ಕರ್ನಾಟಕ ನಿಯಮಾವಳಿಗೆ ಬದ್ಧವಾಗಿ ಜರುಗಲಿದೆ. ಅಲ್ಲದೆ ವಿವಿಧ ದಾನಿಗಳ ಮತ್ತು ಸಂಘ ಸಂಸ್ಥೆಗಳ ನೆರವಿನಿಂದ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕ್ರೀಡಾ ಸಮಿತಿ ಅಧ್ಯಕ್ಷ ಕಪ್ಪಂಡ ದಿಲನ್ ಬೋಪಣ್ಣ, ಸಲಹಾ ಸಮಿತಿ ಅಧ್ಯಕ್ಷ ಮಳವಂಡ ಗಿರೀಶ್ ಮುದ್ದಯ್ಯ, ಪದಾಧಿಕಾರಿಗಳಾದ ಕಂಜಿತಂಡ ಪೂವಣ್ಣ, ಕೋಲತಂಡ ಸುಬ್ರಮಣಿ, ತೀತಿಮಾಡ ಬೋಪಣ್ಣ ಉಪಸ್ಥಿತರಿದ್ದರು.