ನಾಪೋಕ್ಲು ಜ.24 : ನಾಪೋಕ್ಲುವಿನ ಪ್ರತಿಷ್ಠಿತ ಡೆಕ್ಕನ್ ಯೂತ್ ಕ್ಲಬ್ ವತಿಯಿಂದ ಆಯೋಜಿಸಲಾದ 6ನೇ ವರ್ಷದ ನಾಪೋಕ್ಲು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಎಲ್ ರೈಸರ್ಸ್ ತಂಡ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಚೆರಿಯಪರಂಬು ಜನರಲ್ ಕೆ.ಎಸ್ ತಿಮ್ಮಯ್ಯ ಕ್ರೀಡಾಂಗಣರದಲ್ಲಿ ನಡೆದ ಆಕರ್ಷಕ ಫೈನಲ್ ಪಂದ್ಯಾಟದಲ್ಲಿ ಮನ್ಸೂರ್ ನಾಯಕತ್ವದ ರಫಾ ಕ್ರಿಕೇಟರ್ಸ್ ತಂಡವನ್ನು ಮಣಿಸಿ, ನೌಮಾನ್ ನಾಯಕತ್ವದ ಎಲ್ ರೈಸರ್ಸ್ ತಂಡ ನಗದು ಮತ್ತು ಆಕರ್ಷಕ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು .ರಫಾ ಕ್ರಿಕೇಟರ್ಸ್ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಪಂದ್ಯಾವಳಿಯಲ್ಲಿ ನಾಪೋಕ್ಲುವಿನ ಸುಮಾರು 6 ತಂಡಗಳು ಪಾಲ್ಗೊಂಡಿದ್ದವು.
ಪಂದ್ಯಾವಳಿಯಲ್ಲಿ ಉತ್ತಮ ಬ್ಯಾಟ್ಸ್ ಮೆನ್ ಪ್ರಶಸ್ತಿಯನ್ನು ರಫಾ ಕ್ರಿಕೇಟರ್ಸ್ ತಂಡದ ಖಾದರ್ ಪಡೆದುಕೊಂಡರು. ಸರಣಿ ಪುರುಷೋತ್ತಮ ಪ್ರಶಸ್ತಿಯನ್ನು ಎಲ್ ರೈಸರ್ಸ್ ತಂಡದ ನಾಸಿಫ್ ಪಡೆದುಕೊಂಡರೆ, ಉತ್ತಮ ಬೌಲರ್ ಪ್ರಶಸ್ತಿಯನ್ನು ಎಲ್ ರೈಸರ್ಸ್ ತಂಡದ ನೌಮಾನ್ ಪಡೆದರು.ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಎಲ್ ರೈಸರ್ಸ್ ತಂಡದ ಮನ್ಸೂರ್ ಭಾಜನರಾದರು.
ಪಂದ್ಯಾವಳಿಯ ತೀರ್ಪುಗಾರರಾಗಿ ನೌಶಾದ್ ಹಾಗೂ ಸಿದ್ದೀಕ್ ಕಾರ್ಯನಿರ್ವಹಿಸಿದ್ದರು.
ಈ ಸಂದರ್ಭ ಊರಿನ ಹಿರಿಯ ವ್ಯಕ್ತಿಗಳನ್ನು ಹಾಗೂ ಸಾಧಕರನ್ನು ಡೆಕ್ಕನ್ ಯೂತ್ ಕ್ಲಬ್ ನ ಪದಾಧಿಕಾರಿಗಳು ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಪಂದ್ಯಾವಳಿಯನ್ನು ಕೊಡಗು ಜಿಲ್ಲಾ ವಖ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಎಂ.ಎಚ್. ಅಬ್ದುಲ್ ರಹ್ಮಾನ್ ಚಾಲನೆ ನೀಡಿದರು. ಈ ಸಂದರ್ಭ ಜೆಡಿಎಸ್ ಮುಖಂಡರಾದ ಎಂ. ಎ. ಮನ್ಸೂರ್ ಆಲಿ, ಆರ್.ಟಿ.ಐ. ಕಾರ್ಯಕರ್ತ ಹಾರಿಸ್, ಜಮಾಅತ್ ಅಧ್ಯಕ್ಷ ಸಲೀಂ ಹಾರಿಸ್, ಡೆಕ್ಕನ್ ಯೂತ್ ಕ್ಲಬ್ ಅಧ್ಯಕ್ಷ ಮನ್ಸೂರ್, ಪಂದ್ಯಾಟದ ಆಯೋಜಕರಾದ ಫೈಝಲ್, ರಾಶಿದ್,ಪ್ರಮುಖರಾದ ಅರಫಾತ್,ಕೇಲೇಟಿರ ರಂಜನ್ ಅಪ್ಪಚ್ಚು, ಆಬಿದ್, ಅಹಮದ್ ಸಿ.ಎಚ್.ಊರಿನ ಹಿರಿಯರು, ಡೆಕ್ಕನ್ ಯೂತ್ ಕ್ಲಬ್ ನ ಪದಾಧಿಕಾರಿಗಳು, ಪಂದ್ಯಾವಳಿಯಲ್ಲಿ ಪಾಲ್ಗೊಂಡ ತಂಡಗಳ ನಾಯಕರುಗಳು,ಸದಸ್ಯರು ಮತ್ತಿತರರು ಹಾಜರಿದ್ದರು.
(ವರದಿ : ಝಕರಿಯ ನಾಪೋಕ್ಲು)