ಮಡಿಕೇರಿ ಜ.26 : ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕರ್ತವ್ಯ ನಿರತ ಪಿಡಿಒ ಅನಿಲ್ ಕುಮಾರ್ ಮೇಲಿನ ಹಲ್ಲೆಯನ್ನು ಖಾಸಗಿ ಅನುದಾನಿತ ಶಾಲಾ ಕಾಲೇಜು ನೌಕರರ ಸಂಘದ ಕೊಡಗು ಜಿಲ್ಲಾ ಘಟಕದ ಖಂಡಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಘಟಕದ ಅಧ್ಯಕ್ಷ ಪಡಿಞರಂಡ ಪ್ರಭುಕುಮಾರ್, ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಗಳು ಮೇಲಿನಿಂದ ಮೇಲೆ ನಡೆಯುತ್ತಿದ್ದು, ಸರ್ಕಾರಿ ನೌಕರರು ನಿರ್ಭಯವಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಇಂತಹ ಘಟನೆಗಳು ಮರುಕಳಿಸಿದ್ದಲ್ಲಿ ನೌಕರ ವರ್ಗವನ್ನು ಸಂಘಟಿಸಿ ಹೋರಾಟಕ್ಕಿಳಿಯುವ ಸಾಮರ್ಥ್ಯವನ್ನು ನೌಕರರ ಸಂಘಟನೆಗಳು ಹೊಂದಿವೆಯೆಂದು ಎಚ್ಚರಿಕೆ ನೀಡಿದರು.
ಸರ್ಕಾರದ ಜನಪರ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ನೌಕರರ ಜೀವ ಭದ್ರತೆಗೆ ಹೆಚ್ಚಿನ ಒತ್ತನ್ನು ನೀಡಿ ನೌಕರರ ಮನೋಸ್ಥರ್ಯ ಹೆಚ್ಚಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಮತ್ತು ಈ ಘಟನೆಯಲ್ಲಿ ಭಾಗಿಯಾಗಿರುವವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.