ಮಡಿಕೇರಿ ಜ.29 : ಮಡಿಕೇರಿ ತಾಲ್ಲೂಕಿನ ಕುಂದಚೇರಿ ಗ್ರಾ.ಪಂ ವ್ಯಾಪ್ತಿಯ ಕೋಪಟ್ಟಿ ಗ್ರಾಮಸ್ಥರಿಗೆ ಕೊನೆಗೂ ಸೇತುವೆ ಭಾಗ್ಯ ದೊರೆತ್ತಿದೆ. ಕಳೆದ 15 ವರ್ಷಗಳಿಂದ ದೊಡ್ಡ ಹೊಳೆಯನ್ನು ದಾಟಲು ಗ್ರಾಮಸ್ಥರು ಪಡುತ್ತಿದ್ದ ಹರಸಾಹಸದ ಕುರಿತು 2022 ಜೂನ್ ತಿಂಗಳಿನಲ್ಲಿ “ನ್ಯೂಸ್ ಡೆಸ್ಕ್” ವರದಿ ಮಾಡಿತ್ತು. ಇದರ ಫಲಶ್ರುತಿಯಾಗಿ ಲೋಕೋಪಯೋಗಿ ಇಲಾಖೆ ರೂ.35 ಲಕ್ಷ ವೆಚ್ಚದಲ್ಲಿ ಸೇತುವೆಯನ್ನು ನಿರ್ಮಾಣ ಮಾಡಿದೆ. ನೂತನ ಸೇತುವೆಯನ್ನು ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅವರು ಇಂದು ಉದ್ಘಾಟಿಸಿದರು.
2021 ರಲ್ಲಿ ತಲಕಾವೇರಿ ಭಾಗದಲ್ಲಿ ಮಹಾಮಳೆಯಿಂದ ಅನಾಹುತ ಸಂಭವಿಸಿದಾಗ ಕೋಪಟ್ಟಿ ಭಾಗದ ದೊಡ್ಡ ಹೊಳೆಯಲ್ಲಿ ಪ್ರವಾಹದ ರೂಪದಲ್ಲಿ ನೀರು ಹರಿದು ಬಂದಿತ್ತು. ಜೀವ ಉಳಿಸಿಕೊಳ್ಳಬೇಕೆಂದರೆ ಅಥವಾ ತುರ್ತು ಚಿಕಿತ್ಸೆಗೆ ತೆರಳಬೇಕೆಂದರೆ ಯಾವುದೇ ಮಾರ್ಗದ ವ್ಯವಸ್ಥೆ ಇಲ್ಲಿರಲಿಲ್ಲ. ಎಲ್ಲಾ ಸಂದರ್ಭದಲ್ಲೂ ಹೊಳೆ ದಾಟುವುದು ಅನಿವಾರ್ಯವಾಗಿತ್ತು. ಇದರಿಂದ ವಯೋವೃದ್ಧರು ಹಾಗೂ ಮಕ್ಕಳು ಕಷ್ಟಪಡುತ್ತಿದ್ದರು.
ಬೆಟ್ಟದಿಂದ ಬರುವ ಎರಡು ಹೊಳೆಗಳು ಸೇರಿ ಹರಿಯುವ ಈ ನೀರಿನಲ್ಲಿ ದಾಟುವುದು ಅಷ್ಟು ಸುಲಭದ ಮಾತಲ್ಲ. ಕಾರಣ ಇದು ಕಲ್ಲಿನಿಂದ ಕೂಡಿದ ಹೊಳೆ, ಸ್ವಲ್ಪ ನಿಯಂತ್ರಣ ತಪ್ಪಿದರೂ ದಾಟುತ್ತಿರುವವರು ನೀರು ಪಾಲಾಗುವುದು ಖಚಿತವಾಗಿತ್ತು. ಅತ್ಯಂತ ಅಪಾಯಕಾರಿ ಪರಿಸ್ಥಿತಿಯನ್ನು ಎದುರಿಸುತ್ತಿದ್ದ ಗ್ರಾಮಸ್ಥರು ಶಾಶ್ವತ ಸೇತುವೆಗಾಗಿ ಹಲವು ಬಾರಿ ಮನವಿ ಮಾಡಿಕೊಂಡರೂ ಪ್ರಯೋಜನವಾಗಿರಲಿಲ್ಲ.
2022 ರಲ್ಲಿಯೂ ಮಹಾಮಳೆಯಿಂದ ಸಂಕಷ್ಟ ಎದುರಾಗಬಹುದೆನ್ನುವ ಆತಂಕದಲ್ಲಿ ಕೋಪಟ್ಟಿಯ ಸೋಮೆಟ್ಟಿ, ದಾಯನ ಹಾಗೂ ಪೊಡನೋಲನ ಕುಟುಂಬಸ್ಥರು ಸುರಿಯುವ ಗಾಳಿಮಳೆಯ ನಡುವೆಯೇ ಹೊಳೆಗೆ ಕಾಲು ಸೇತುವೆಯನ್ನು ನಿರ್ಮಿಸಿದರು. ಗ್ರಾಮಸ್ಥರ ಸಹಕಾರದೊಂದಿಗೆ ಬಿದಿರು ಮತ್ತು ಮರದ ತುಂಡುಗಳನ್ನು ಬಳಸಿ ತಾತ್ಕಾಲಿಕ ಸೇತುವೆಯನ್ನು ನಿರ್ಮಿಸುತ್ತಿದ್ದಾಗ “ನ್ಯೂಸ್ ಡೆಸ್ಕ್” ಈ ಕುರಿತು ವರದಿ ಮಾಡಿ ಆಡಳಿತ ವ್ಯವಸ್ಥೆಯ ಗಮನ ಸೆಳೆದಿತ್ತು.
ಗ್ರಾಮಸ್ಥರ ಸಂಕಷ್ಟದ ಸಂಪರ್ಕ ವ್ಯವಸ್ಥೆ ಕುರಿತು ವರದಿ ಮಾಡಿದ ಏಳು ತಿಂಗಳಿನಲ್ಲೇ ನೂತನ ಸೇತುವೆ ನಿರ್ಮಾಣಗೊಂಡಿದೆ.
::: ನೂತನ ಸೇತುವೆ ಉದ್ಘಾಟನೆ :::
ನೂತನ ಸೇತುವೆಯನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಕೆ.ಜಿ.ಬೋಪಯ್ಯ ಗ್ರಾಮೀಣ ಜನರ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು.
ಗ್ರಾಮಸ್ಥರ ಹಲವು ವರ್ಷಗಳ ಬೇಡಿಕೆ ಈಗ ಈಡೇರಿದೆ. ಮಳೆಗಾಲದಲ್ಲಿ ಈ ಭಾಗದ ಜನರು ಸಂಪರ್ಕ ಕಳೆದುಕೊಂಡು ಸಂಕಷ್ಟ ಎದುರಿಸುತ್ತಿದ್ದರು. ಇದೀಗ ನೂತನ ಸೇತುವೆ ನಿರ್ಮಾಣದ ಮೂಲಕ ಸಮಸ್ಯೆ ಬಗೆ ಹರಿದಿದೆ. ಆದರೆ ಕೆಲವು ರಸ್ತೆಗಳು ಹದಗೆಟ್ಟಿದ್ದು, ಕಾಂಕ್ರೀಟ್ ರಸ್ತೆ ನಿರ್ಮಾಣದ ಅಗತ್ಯವಿದೆ. ಅಲ್ಲದೆ ಇಲ್ಲಿನ ಮತ್ತೊಂದು ಸೇತುವೆ ಸಂಪೂರ್ಣವಾಗಿ ಶಿಥಿಲಗೊಂಡಿದ್ದು, ಮುಂದಿನ ದಿನಗಳಲ್ಲಿ ನೂತನ ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
::: ಸನ್ಮಾನ :::
ನೂತನ ಸೇತುವೆ ನಿರ್ಮಾಣಕ್ಕೆ ಕಾಳಜಿ ತೋರಿದ ಶಾಸಕ ಕೆ.ಜಿ.ಬೋಪಯ್ಯ ಅವರನ್ನು ಗ್ರಾಮಸ್ಥರು ಪೇಟ ತೊಡಿಸಿ, ಶಾಲು ಹೊದಿಸಿ ಸನ್ಮಾನಿಸಿದರು.
ಕುಂದಚೇರಿ ಗ್ರಾ.ಪಂ ಅಧ್ಯಕ್ಷರಾದ ಸವಿತಾ ಉದಯಕುಮಾರ್, ಸದಸ್ಯರಾದ ಪಿ.ಬಿ.ದಿನೇಶ್, ಬೇಬಿ ಪೊನ್ನಪ್ಪ, ಅಯ್ಯಂಗೇರಿ ಗ್ರಾ.ಪಂ ಅಧ್ಯಕ್ಷ ರಂಜು, ಭಾಗಮಂಡಲ ಗ್ರಾ.ಪಂ ಉಪಾಧ್ಯಕ್ಷ ಹೊಸೂರು ಸತೀಶ್ ಕುಮಾರ್, ಪ್ರಮುಖರಾದ ಕಾಡಂಡ ಭೀಮಯ್ಯ, ಡಲೇಶ್ ಕುಮಾರ್, ದಾಯನ ಹರ್ಷವರ್ಧನ್, ಉತ್ತಪ್ಪ, ಶ್ರೀಧರ್ ಮತ್ತಿತರ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
::: ಸಿಹಿ ಹಂಚಿ ಸಂಭ್ರಮ :::
ನೂತನ ಸೇತುವೆ ನಿರ್ಮಾಣಗೊಂಡ ಹಿನ್ನೆಲೆ ಸ್ಥಳೀಯ ಗ್ರಾಮಸ್ಥರು ಸಿಹಿ ಹಂಚಿ ಸಂಭ್ರಮಿಸಿದರು. “ನ್ಯೂಸ್ ಡೆಸ್ಕ್” ಕಚೇರಿಗೆ ಆಗಮಿಸಿದ್ದ ಗ್ರಾಮಸ್ಥರು ಸಿಹಿ ನೀಡಿ ಕೃತಜ್ಞತೆ ಸಲ್ಲಿಸಿದರು.
Breaking News
- *ಬಾಳುಗೋಡುವಿನಲ್ಲಿ ಸಂಭ್ರಮದ ಕೊಡವ ನಮ್ಮೆ : ಕೊಡವ ಸಂಸ್ಕೃತಿ, ಪರಂಪರೆಗಳ ಉಳಿವಿಗೆ ಶ್ರಮಿಸಿ : ಶಾಸಕ ಎ.ಎಸ್.ಪೊನ್ನಣ್ಣ*
- *ವಿರಾಜಪೇಟೆಯಲ್ಲಿ ಶಾಸಕರಿಂದ ಕೃಷಿ ಯಂತ್ರೋಪಕರಣ ವಿತರಣೆ*
- *ಮಡಿಕೇರಿ : ನ್ಯುಮೋನಿಯಾ ಯಶಸ್ವಿಯಾಗಿ ಕೊನೆಗೊಳಿಸಲು ಸಾಮಾಜಿಕ ಜಾಗೃತಿ ಅಭಿಯಾನ*
- *ಕೊಡಗು : ಪ್ರಧಾನಮಂತ್ರಿ 15 ಅಂಶದ ಕಾರ್ಯಕ್ರಮ ಪ್ರಗತಿ ಸಾಧಿಸಿ : ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೂಚನೆ*
- *ಕೊಡಗು : ಶಿಶು ಮರಣ ತಡೆಯಲು ಹೆಚ್ಚಿನ ಜಾಗೃತಿ ಮೂಡಿಸಿ : ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಸೂಚನೆ*
- *ಮಡಿಕೇರಿಯ ಹೃದಯ ಭಾಗದಲ್ಲಿ ವಾಣಿಜ್ಯ ಸಂಕೀರ್ಣ ಮಾರಾಟಕ್ಕಿದೆ*
- *ನ.30 ರಂದು ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಕೊಡಗು ಜಿಲ್ಲಾ ಪ್ರವಾಸ*
- *ಜಾರ್ಖಂಡ್ನ 14ನೇ ಮುಖ್ಯಮಂತ್ರಿಯಾಗಿ ಹೇಮಂತ್ ಸೊರೆನ್ ಪ್ರಮಾಣ ವಚನ ಸ್ವೀಕಾರ*
- *ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು*
- *TO LET / ಬಾಡಿಗೆಗೆ*