ಸುಂಟಿಕೊಪ್ಪ, ಜ.30 : ಸುಂಟಿಕೊಪ್ಪ ಹೋಬಳಿಯ ಕೊಡಗರಹಳ್ಳಿ, ಕಂಬಿಬಾಣೆ, 7ನೇ ಹೊಸಕೋಟೆ, ಮತ್ತಿಕಾಡು, ಭೂತನಕಾಡು ಹಾಗೂ ಮಿನುಕೊಲ್ಲಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು, ಬೆಳೆಗಾರರಲ್ಲಿ ಆತಂಕ ಸೃಷ್ಟಿಯಾಗಿದೆ.
ಹವಾಮಾನ ವೈಪರಿತ್ಯ ಹಿನ್ನಲೆಯಲ್ಲಿ ಆಕಾಲಿಕ ಮಳೆ ಮೋಡಕವಿದ ವಾತವಾರಣದಿಂದಾಗಿ ಕಾಫಿ ಸಂಸ್ಕರಣೆಯ ಮೇಲೆ ದುಷ್ಪಾರಿಣಾಮ ಬೀರಿದ್ದು, ಇದರಿಂದಾಗಿ ಕಾಫಿಯ ಬೆಲೆ ಗಣನೀಯ ಪ್ರಮಾಣದಲ್ಲಿ ಏರಿದ್ದರೂ ಕೂಡ ಹೌಟ್ ಟರ್ನ್ ಮತ್ತು ತೇವಾಂಶದ ಹಿನ್ನಲೆಯಲ್ಲಿ ಬೆಳೆಗಾರರಿಗೆ ತೀವ್ರ ಕುಸಿತ ಕಾಣುತ್ತಿದೆ.
ಕೆಲವು ಸಮಯ ಇಲ್ಲವಾಗಿದ್ದ ಕಾಡಾನೆಗಳ ಹಿಂಡು ಇದೀಗ ಮತ್ತೆ ಕಾಣಿಸಿಕೊಂಡಿದ್ದು, ಕಾಫಿ, ಅಡಿಕೆ, ಬಾಳೆ, ಕಿತ್ತಳೆ, ಬೆಣ್ಣೆ ಹಣ್ಣಿನ ಗಿಡಗಳನ್ನು ನಾಶಪಡಿಸುತ್ತಿವೆ. ಕಂಬಿಬಾಣೆ ಗ್ರಾ.ಪಂ ಗೆ ಒಳಪಡುವ ಉಪ್ಪುತೋಡು ವ್ಯಾಪ್ತಿಯಲ್ಲಿ ಕೆ.ಎಸ್.ಮಂಜುನಾಥ್ ಅವರ ತೋಟದಲ್ಲಿ ಆನೆ ದಾಳಿ ನಡೆಸಿ ಸಾಕಷ್ಟು ಪ್ರಮಾಣದಲ್ಲಿ ನಷ್ಟ ಉಂಟುಮಾಡಿದ್ದು, ಅರಣ್ಯ ಇಲಾಖೆ ಹಾಗೂ ಸರ್ಕಾರ ಕಡಾನೆ ಹಾವಳಿ ತಡೆಗಟ್ಟಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಬೆಳೆಗಾರರು ಒತ್ತಾಯಿಸಿದ್ದಾರೆ.
ಕಾಡಾನೆ ಹಾವಳಿಯನ್ನು ತಡೆಗಟ್ಟಲು ರಾಜ್ಯ ಸರಕಾರವು ಚಿಕ್ಕಮಗಳೂರು, ಹಾಸನ, ಕೊಡಗು ಮೈಸೂರು ಜಿಲ್ಲೆಗಳಲ್ಲಿ ಕ್ಷೀಪ್ರಪಡೆಯ ತಂಡ ರಚಿಸಿದೆ.
ಕೊಡಗಿನಲ್ಲಿ ಕಾರ್ಯಪಡೆಗೆ 1 ಡಿಎಫ್‍ಓ, 1 ಎಸಿಎಫ್,1ಆರ್‍ಎಫ್‍ಓ, 4 ಜನ ಡಿಆರ್‍ಎಫ್‍ಓ, 8ಮಂದಿ ಫಾರೆಸ್ಟ್ ಗಾಡ್ರ್ಸ್, 32 ಮಂದಿ ದಿನಗೂಲಿ ನೌಕರರ ತಂಡವನ್ನು ನೇಮಕಗೊಳಿಸಲಾಗಿದೆ. ಕೊಡಗು ಜಿಲ್ಲೆಯಲ್ಲಿ ಕಾರ್ಯಪಡೆ ತಂಡ ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲಾ ಕೇಂದ್ರದಲ್ಲಿ ಸಹಾಯವಾಣಿ ಸ್ಥಾಪಿಸಲಾಗಿದೆ. ಸಾರ್ವಜನಿಕರು ಕಾಡಾನೆ ಹಾವಳಿ ಕಂಡು ಬಂದಲ್ಲಿ ದೂರವಾಣಿ 8277124444 ಸಂಖ್ಯೆಯಗೆ ಕರೆ ಮಾಡಿದ್ದಲ್ಲಿ ತಂಡ ಕಾರ್ಯೋನ್ಮುಖವಾಗಲಿದೆ.
ಈ ತಂಡವು ಜಿಲ್ಲೆಯ ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆ, ತಿತಿಮತಿ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ದೂರವಾಣಿ ಮಾಹಿತಿ ಬಂದ ತಕ್ಷಣವೇ ಮಾಹಿತಿಯನ್ನು ನೀಡಿ ಸದರಿ ಸ್ಥಳೀಯ ವಲಯ ಸಿಬ್ಬಂದಿಗಳೊಂದಿಗೆ ಆನೆ ಹಾವಳಿ ಪ್ರದೇಶಗಳಿಗೆ ಭೇಟಿ ನೀಡಿ ಕಾಡಾನೆಯನ್ನು ಅರಣ್ಯ ಓಡಿಸಲು ಕ್ರಮಕೈಗೊಳ್ಳಲಾಗುವುದು ಎಂದು ಎಸಿಎಫ್ ತಿಳಿಸಿದರು.