ಮಡಿಕೇರಿ ಜ.31 : ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಅನುಗುಣವಾಗಿ ಗ್ರಾ.ಪಂ ನೌಕರರಿಗೆ ಕನಿಷ್ಠ ವೇತನ ನಿಗಧಿಪಡಿಸುವಂತೆ ಒತ್ತಾಯಿಸಿ ಫೆ.14 ರಂದು ಕರ್ನಾಟಕ ರಾಜ್ಯ ಗ್ರಾ.ಪಂ ನೌಕರರ ಸಂಘದ ವತಿಯಿಂದ ಬೆಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಗ್ರಾ.ಪಂ ನೌಕರರ ಸಂಘದ ಜಿಲ್ಲಾಧ್ಯಕ್ಷ ಪಿ.ಆರ್.ಭರತ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಂದು ಬೆಳಗ್ಗೆ 10.30 ಗಂಟೆಗೆ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಿಂದ ಮೆರವಣಿಗೆ ಮೂಲಕ ತೆರಳಿ `ವಿಧಾನಸೌಧ’ ಕ್ಕೆ ಮುತ್ತಿಗೆ ಹಾಕಲಾಗುವುದು. ಕೊಡಗು ಜಿಲ್ಲೆಯಿಂದ ಸುಮಾರು 200ಕ್ಕೂ ಹೆಚ್ಚು ಗ್ರಾ.ಪಂ ನೌಕರರು ತೆರಳಲಿದ್ದಾರೆ ಎಂದರು.
ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಗ್ರಾ.ಪಂ ನೌಕರರ ಬದುಕಿಗೆ ಸಂಕಷ್ಟ ಎದುರಾಗಿದೆ. ಸರ್ಕಾರ ಘೋಷಿಸಿರುವ ಕನಿಷ್ಠ ವೇತನ ಬೆಲೆ ಏರಿಕೆಗನುಗುಣವಾಗಿ ಇಲ್ಲದಿರುವುದರಿಂದ ಕಾನೂನು ಬದ್ಧ ಕನಿಷ್ಟ ವೇತನ ನೀಡಬೇಕು, ಪಿಂಚಣಿ, ಆರೋಗ್ಯಭತ್ಯೆ, ಅನುಮೋದನೆ, ಮೃತರ ಕುಟುಂಬಕ್ಕೆ ಅನುಕಂಪ ನೇಮಕಾತಿ, ಸೇವಾ ಭದ್ರತೆ ಮತ್ತಿತರ ಬೇಡಿಕೆಗಳು ಇನ್ನೂ ಕೂಡ ಈಡೇರದೆ ಇರುವುದು ವಿಷಾದಕರ ಎಂದು ಬೇಸರ ವ್ಯಕ್ತಪಡಿಸಿದರು.
ಗ್ರಾ.ಪಂ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ವಿಭಾಗಗಳ ನೌಕರರಿಗೆ ಕನಿಷ್ಠ ವೇತನ 25 ಸಾವಿರ ರೂ. ನಿಗಧಿಪಡಿಸಬೇಕು, ಪ್ರತಿ ತಿಂಗಳು ಕನಿಷ್ಠ 6 ಸಾವಿರ ರೂ. ಪಿಂಚಣಿ ವ್ಯವಸ್ಥೆ ಜಾರಿಗೆ ಬರಬೇಕು, ಮರಣ ಹೊಂದಿದ ಕುಟುಂಬಕ್ಕೆ ಅನುಕಂಪದ ನೌಕರಿ ನೀಡಬೇಕು, ಧ್ವಜಾರೋಹಣ ಮಾಡುವವರ ಭತ್ಯೆ ದಿನಕ್ಕೆ 30 ರಿಂದ 60ಕ್ಕೆ ಏರಿಕೆ ಮಾಡಬೇಕು, ಗ್ರಾ.ಪಂ ಗಳಲ್ಲಿ ಕಾರ್ಯನಿರ್ವಹಿಸುವ ನೌಕರರಿಗೆ ವರ್ಗಾವಣೆಗೆ ಅವಕಾಶ ನೀಡಬೇಕು, ಕಾರ್ಯದರ್ಶಿ ಹಾಗೂ ಲೆಕ್ಕ ಸಹಾಯಕ ಹುದ್ದೆಗೆ ಬಡ್ತಿ ನೀಡಬೇಕು, ಗ್ರಾ.ಪಂ ನ್ನು ಮೇಲ್ದರ್ಜೆಗೇರಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಬೆಂಗಳೂರು ಚಲೋ ನಡೆಸುತ್ತಿರುವುದಾಗಿ ಭರತ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪೌರಕಾರ್ಮಿಕ ರಂಗಸ್ವಾಮಿ ಹಾಜರಿದ್ದರು.