ಮಡಿಕೇರಿ ಜ.31 : ಕೊಡಗು ಜಿಲ್ಲೆಯ ಸುಂಟಿಕೊಪ್ಪ-ಸೋಮವಾರಪೇಟೆ, ಮಡಿಕೇರಿ-ವಿರಾಜಪೇಟೆ ಮತ್ತು ಪೊನ್ನಂಪೇಟೆ-ಶ್ರೀಮಂಗಲ ಮಾರ್ಗದಲ್ಲಿ ನಡೆಯುತ್ತಿರುವ 66 ಕೆವಿ ವಿದ್ಯುತ್ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಸೂಚಿಸಿದ್ದಾರೆ.
ಜಿಲ್ಲೆಯಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ವತಿಯಿಂದ ಈಗಾಗಲೇ 66 ಕೆವಿ ವಿದ್ಯುತ್ ಮಾರ್ಗದ ಕಾಮಗಾರಿ ಸಂಬಂಧಿಸಿದಂತೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾಹಿತಿ ಪಡೆದು ಮಾತನಾಡಿದರು.
ವಿದ್ಯುತ್ ಕಾಮಗಾರಿ ಸಂಬಂಧಿಸಿದಂತೆ ವಿದ್ಯುತ್ ಮಾರ್ಗ ಹಾದು ಹೋಗುವ ಭೂ ಮಾಲೀಕರಿಗೆ ಮೊದಲೇ ಮಾಹಿತಿ ನೀಡಿ, ಸರ್ವೇ ಕಾರ್ಯಕ್ಕೆ ಮನವರಿಕೆ ಮಾಡಬೇಕು. ರೋಸ್ ವುಡ್ ಹೊರತುಪಡಿಸಿ ಉಳಿದ ಮರಗಳನ್ನು ಭೂ ಮಾಲೀಕರಿಗೆ ನೀಡಬೇಕು. ವಿದ್ಯುತ್ ಮಾರ್ಗವನ್ನು ತ್ವರಿತವಾಗಿ ಸರ್ವೇ ಮಾಡಿ ಕಾಮಗಾರಿ ಪೂರ್ಣಗೊಳಿಸುವಂತೆ ಅಪ್ಪಚ್ಚು ರಂಜನ್ ಅವರು ಕೆಪಿಟಿಸಿಎಲ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ರೈತರ ವಿಶ್ವಾಸ ಪಡೆದು ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು. ಮಾದಾಪುರ-ಕುಂಬೂರು ಮಾರ್ಗದಲ್ಲಿ ಕಳೆದ ಎರಡೂವರೆ ವರ್ಷಗಳಿಂದ ವಿದ್ಯುತ್ ಕಾಮಗಾರಿ ಆಗಿಲ್ಲ ಎಂದು ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಅತೃಪ್ತಿ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಮಾತನಾಡಿ ಜಿಲ್ಲೆಯಲ್ಲಿ ಪ್ರಮುಖವಾಗಿ ಮಡಿಕೇರಿ-ವಿರಾಜಪೇಟೆ ಮಾರ್ಗ, ಸುಂಟಿಕೊಪ್ಪ-ಸೋಮವಾರಪೇಟೆ, ಪೊನ್ನಂಪೇಟೆ-ಶ್ರೀಮಂಗಲ ಮಾರ್ಗದಲ್ಲಿ 66 ಕೆ.ವಿ. ವಿದ್ಯುತ್ ಪ್ರಸರಣ ಕೇಂದ್ರ ನಿರ್ಮಿಸಲಾಗುತ್ತಿದ್ದು, ಈ ಸಂಬಂಧ ಬಾಕಿ ಇರುವ ಸರ್ವೇ ಕಾರ್ಯ ಪೂರ್ಣಗೊಳಿಸಬೇಕು. ವಿದ್ಯುತ್ ಮಾರ್ಗ ಹಾದು ಹೋಗುವ ಭೂಮಿಯ ಮಾಲೀಕರಿಗೆ ಸರ್ಕಾರದ ನಿಯಮದಂತೆ ಪರಿಹಾರ ಒದಗಿಸಲಾಗುವುದು ಎಂದರು.
ಮಾದಾಪುರ, ಮುಕ್ಕೋಡ್ಲು, ಗರ್ವಾಲೆ, ಸೂರ್ಲಬ್ಬಿ ಮತ್ತಿತರ ಕಡೆಗಳಲ್ಲಿ ವಿದ್ಯುತ್ ಕಲ್ಪಿಸಬೇಕು. ವಿದ್ಯುತ್ ಸಂಪರ್ಕ ಅತ್ಯಗತ್ಯವಾಗಿ ಬೇಕಿರುವ ಇಲ್ಲಿ, 66 ಕೆವಿ ವಿದ್ಯುತ್ ಸ್ಟೇಷನ್ ನಿರ್ಮಾಣ ಮಾಡಬೇಕು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.
ಕೆಪಿಟಿಸಿಎಲ್ ಕಾರ್ಯಪಾಲಕ ಎಂಜಿನಿಯರ್ ಮಾದೇಶ್ ಅವರು ಮಾಹಿತಿ ನೀಡಿ ಜಿಲ್ಲೆಯಲ್ಲಿ ಮೂರು ಪ್ರಮುಖ ವಿದ್ಯುತ್ ಯೋಜನೆಗಳಲ್ಲಿ ಸುಂಟಿಕೊಪ್ಪ-ಸೋಮವಾರಪೇಟೆ ಹಾದು ಹೋಗುವ ಮಾರ್ಗದಲ್ಲಿ ಶೇ.70 ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಹಾನಗಲ್ಲು-ಶೆಟ್ಟಳ್ಳಿ, ಹಾಗೆಯೇ ಐಗೂರು, ಕಿರಗಂದೂರಿನಲ್ಲಿ ಸರ್ವೆ ಕಾರ್ಯ ವಿಳಂಬವಾಗಿದೆ ಎಂದು ಅವರು ಮಾಹಿತಿ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಸರ್ವೇ ಮಾಡಿ ವಿದ್ಯುತ್ ಮಾರ್ಗ ಹಾದು ಹೋಗುವ ಕಡೆಗಳಲ್ಲಿನ ಮರಗಳನ್ನು (ರೋಸ್ ವುಡ್ ಹೊರತುಪಡಿಸಿ) ಸಂಬಂಧ ಪ್ಲಾಂಟರ್ಸ್‍ಗಳಿಗೆ ನೀಡಬೇಕು ಎಂದು ಸಲಹೆ ಮಾಡಿದರು.
ಈ ಬಗ್ಗೆ ಮಾಹಿತಿ ನೀಡಿದ ಭೂದಾಖಲೆಗಳ ಉಪ ನಿರ್ದೇಶಕರಾದ ಪಿ.ಶ್ರೀನಿವಾಸ್ ಮತ್ತು ಸಹಾಯಕ ನಿರ್ದೇಶಕರಾದ ವಿರುಪಾಕ್ಷ ಅವರು ಸರ್ವೇ ಕಾರ್ಯವನ್ನು ಸದ್ಯದಲ್ಲಿಯೇ ಪೂರ್ಣಗೊಳಿಸಲಾಗುವುದು ಎಂದರು.
ಮರ ಕಟಾವು ಅಥವಾ ತೆರವು ಕಾರ್ಯವನ್ನು ಅರಣ್ಯ ಇಲಾಖೆ ಕೈಗೊಳ್ಳಬೇಕಿದೆ. ಆ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳ ಜೊತೆ ಸಮನ್ವಯ ಸಾಧಿಸಲಾಗುವುದು ಕೆಪಿಟಿಸಿಎಲ್ ಅಧಿಕಾರಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪೂವಯ್ಯ ಅವರು ಭೂ ಮಾಲೀಕರು ಭೂಮಿಯ ಆರ್‍ಟಿಸಿ ಒದಗಿಸಿದಲ್ಲಿ ಸಣ್ಣಪುಟ್ಟ ಮರಗಳನ್ನು ಭೂಮಾಲೀಕರಿಗೆ ನೀಡಬಹುದಾಗಿದೆ ಎಂದರು.
ಮಾದಾಪುರದಲ್ಲಿ 2 ಎಕರೆ ಭೂಮಿ ನೀಡಿದ್ದರೂ ಸಹ ಇದುವರೆಗೆ ವಿದ್ಯುತ್ ಉಪ ಕೇಂದ್ರ ಸ್ಥಾಪಿಸಿಲ್ಲ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.
ಜಿ.ಪಂ.ಸಿಇಒ ಡಾ.ಎಸ್.ಆಕಾಶ್ ಅವರು ವಿದ್ಯುತ್ ಕಾಮಗಾರಿಯ ತಮ್ಮ ವ್ಯಾಪ್ತಿಗೆ ಸಂಬಂಧಿಸಿದಂತೆ ಹಲವು ಮಾಹಿತಿ ನೀಡಿದರು. ವಿದ್ಯುತ್ ಇಲಾಖೆಯ ಮುಖ್ಯ ಎಂಜಿನಿಯರ್ ಅನುರಾಗ್, ಅಧೀಕ್ಷಕ ಎಂಜಿನಿಯರ್ ರಮೇಶ್, ಎಇಇ ಸಂದೇಶ್, ಸೆಸ್ಕ್ ಇಇ ಅನಿತಾ ಬಾಯಿ, ಡಿಸಿಎಫ್ ಶರಣ ಬಸಪ್ಪ, ಇತರರು ಇದ್ದರು.