ನಾಪೋಕ್ಲು ಫೆ.2 : ಕಾಫಿ ಮಂಡಳಿಯಿಂದ ರೈತರಿಗೆ ಸಿಗುವ ಸೌಲಭ್ಯಗಳು, ಮತ್ತು ಕಾಫಿ ತೋಟದ ನಿರ್ವಹಣೆ, ಮಣ್ಣು ಪರೀಕ್ಷೆ ಸಮಗ್ರ ಮಾಹಿತಿ ಹಾಗೂ ಮುಂದಿನ ದಿನಗಳಲ್ಲಿ ರೈತರ ತೋಟಗಳಿಗೆ ಭೇಟಿ ನೀಡಿ ಮಣ್ಣು ಪರೀಕ್ಷೆ ಮಾಡುವುದು ಹಾಗೂ ಬೆಳೆಗಾರರಿಗೆ ಮತ್ತು ಕಾರ್ಮಿಕರಿಗೆ ಕಾಫಿ ಗಿಡಗಳ ನಿರ್ವಹಣೆ ಕುರಿತು ತರಬೇತಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಕಾಫಿ ಮಂಡಳಿಯ ಉಪನಿರ್ದೇಶಕ ಡಾ. ಚಂದ್ರಶೇಖರ್ ಮಾಹಿತಿ ನೀಡಿದರು.
ಸಮೀಪದ ಕಕ್ಕಬ್ಬೆಯ ಪ್ರಾಥಮಿಕಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದ ಕಾಫಿ ಮಂಡಳಿ ಹಾಗೂ ಬೆಳೆಗಾರರ ನಡುವಿನ ಸಂವಾದ ಕಾರ್ಯಕ್ರಮದಲ್ಲಿ ಕಿರು ಚಿತ್ರಪ್ರದರ್ಶನದ ಮೂಲಕ ಮಾಹಿತಿ ನೀಡಿದರು.
ಕಾಫಿ ಮಂಡಳಿಯ ಅಧಿಕಾರಿಗಳಾದ (ಜೆ ಎಲ್ ಓ) ಅಜಿತ್ ಕುಮಾರ್ ರಾವತ್, ಚಟ್ಟಳ್ಳಿ ಕಾಫಿ ಸಂಶೋಧನಾ ಕೇಂದ್ರದ ಮಂಜುನಾಥ್ ರೆಡ್ಡಿ ಇದ್ದ ಬೆಳಗಾರರ ಸಮಸ್ಯೆಯ ಬಗ್ಗೆ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಪ್ರಾಥಮಿಕಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕಲ್ಯಾಟಂಡ ರಘು ತಮ್ಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂಪನ್ನ ಅಯ್ಯಪ್ಪ, ಪಾಂಡಂಡ ನರೇಶ್, ಬಡಕಡ ಸುರೇಶ್ ಬೆಳ್ಯಪ್ಪ, ಕಕ್ಕಬ್ಬೆ ವ್ಯಾಪ್ತಿಯ ಬೆಳೆಗಾರರು ಪಾಲ್ಗೊಂಡು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ವರದಿ : ದುಗ್ಗಳ ಸದಾನಂದ