ಮಡಿಕೇರಿ ಫೆ.2 ; ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್.ಆಕಾಶ್ ಅವರ ಅಧ್ಯಕ್ಷತೆಯಲ್ಲಿ ಸ್ಪರ್ಶ್ ಕುಷ್ಠರೋಗ ಜಾಗೃತಿ ಆಂದೋಲನ ಕಾರ್ಯಕ್ರಮದ ಬಗ್ಗೆ ಸಭೆ ನಡೆಯಿತು.
ಜಿ.ಪಂ.ಸಿಇಒ ಡಾ.ಎಸ್.ಆಕಾಶ್ ಅವರು ಭಿತ್ತಿ ಪತ್ರ, ಕರಪತ್ರ ಹಾಗೂ ಬ್ಯಾನರ್‍ಗಳನ್ನು ಬಿಡುಗಡೆಗೊಳಿಸಿ ಮಾತನಾಡಿ ಕುಷ್ಠರೋಗದ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸುವ ಸಲುವಾಗಿ ಕಾರ್ಯಕ್ರಮ ನಡೆಸಲಾಯಿತು. ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಕುಷ್ಠರೋಗದ ಬಗ್ಗೆ ಹೆಚ್ಚಿನ ಅರಿವು ಮೂಡಿಸುವುದು ಅಗತ್ಯ ಎಂದು ತಿಳಿಸಿದರು.
ಜಿಲ್ಲಾ ಕುಷ್ಠರೋಗ ನಿಯಂತ್ರಣ ಕಾರ್ಯಕ್ರಮಾಧಿಕಾರಿ ಡಾ.ಎನ್.ಆನಂದ್ ಅವರು ಮಾತನಾಡಿ ಫೆಬ್ರವರಿ 13 ರವರೆಗೆ ಜಿಲ್ಲಾದ್ಯಂತ “ಸ್ಪರ್ಶ್ ಕುಷ್ಠರೋಗ ಜಾಗೃತಿ ಅಭಿಯಾನ” ಕಾರ್ಯಕ್ರಮ ನಡೆಯಲಿದೆ. ಪ್ರತಿ ಗ್ರಾಮಗಳಲ್ಲಿ ಹಾಗೂ ನಗರ ಪ್ರದೇಶಗಳಲ್ಲಿ ಈ ಬಗ್ಗೆ ಅರಿವು ಮೂಡಿಸಲಾಗುತ್ತಿದೆ, ಹಾಗೂ ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರಸ ಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಂಡು ವಿದ್ಯಾರ್ಥಿಗಳಲ್ಲಿ ಕುಷ್ಠರೋಗದ ಬಗ್ಗೆ ಅರಿವು ಮೂಡಿಸಲಾಗುವುದು ಎಂದರು.
ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸುವ ಸಲುವಾಗಿ ರೇಡಿಯೋ ಪ್ರಸಾರವನ್ನು ಕೂಡ ಮಾಡಲಾಗುವುದು. ಕೊಡಗು ಜಿಲ್ಲೆಯಲ್ಲಿ ಒಟ್ಟು 3 ಬಹುಕ್ರ್ರಿಮಿಗಳ (ಎಂಬಿ) ಪ್ರಕರಣಗಳಿದ್ದು, ಇವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು ಸೆಲ್ಫ್‍ಕೇರ್ ಕಿಟ್ ಹಾಗೂ ಎಂಸಿಆರ್ ಫೂಟ್‍ವೇರ್‍ಗಳನ್ನು ಸಹ ನೀಡಿದ್ದೇವೆ ಎಂದು ಹೇಳಿದರು.
ವ್ಯಾಪಕ ಮಾಹಿತಿ ನೀಡುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಪ್ರಾಥಮಿಕ ಆರೋಗ್ಯ ಸಂರಕ್ಷಣಾ ಅಧಿಕಾರಿಗಳಿಗೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ತಿಳಿಸಲಾಗಿದೆ ಎಂದರು.
ವಿವಿಧ ಇಲಾಖೆಯ ವ್ಯಾಪ್ತಿಯಲ್ಲಿ ಸಭೆಗಳನ್ನು ನಡೆಸಿ ಕುಷ್ಠರೋಗದ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ನಡೆಸಲಾಗುತ್ತಿದೆ ಎಂದು ಡಾ.ಆನಂದ್ ಅವರು ಹೇಳಿದರು.
ಕುಷ್ಠರೋಗಕ್ಕೆ ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ, ಈ ಜಾಗೃತಿ ಅಭಿಯಾನದ ಸಂದರ್ಭದಲ್ಲಿ ಶಾಲಾ ಮಕ್ಕಳ ತಪಾಸಣೆ, ಉಪ ಆರೋಗ್ಯ ಕೇಂದ್ರ ಮೂಲಕ ಗ್ರಾಮದಲ್ಲಿ ಜಾಗೃತಿ ಮೂಡಿಸುವುದಲ್ಲದೇ, ಕುಷ್ಠರೋಗ ನಿರ್ಮೂಲನೆಯ ಕುರಿತು ಎಲ್ಲರಿಗೂ ಪ್ರತಿಜ್ಞಾ ವಿಧಿ ಭೋದಿಸಲಾಗುವುದು ಎಂದರು.
ಪಾದಗಳ ಮತ್ತು ಬೆರಳುಗಳ ದೌರ್ಬಲ್ಯ, ಕಣ್ಣು ಮುಚ್ಚುವಲ್ಲಿ ತೊಂದರೆ, ವ್ಯಕ್ತಿಯ ದೇಹದ ಮೇಲೆ ಸ್ಪರ್ಶ ಜ್ಞಾನವಿಲ್ಲ ಮಚ್ಚೆಗಳು, ತ್ವಚ್ಚೆಯ ಮೇಲೆ ಕೆಂಪಾದ ಬಾವು, ನೋವಿನಿಂದ ಕೂಡಿದ ಹಗ್ಗದ ಹಾಗೆ ಊದಿಕೊಂಡ ನರಗಳು, ವ್ಯಕ್ತಿಯ ದೇಹದ ಯಾವುದೇ ಭಾಗಗಳಲ್ಲಿ ತಿಳಿ ಬಿಳಿ ತಾಮ್ರದ ವರ್ಣದ ಸ್ಪರ್ಶ ಜ್ಞಾನವಿಲ್ಲದ ಮಚ್ಚೆ, ಮಚ್ಚೆಗಳು ಕಂಡುಬಂದಲ್ಲಿ ಸಮೀಪದ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ತೆರಳಿ ಪರೀಕ್ಷಿಸಿಕೊಳ್ಳಬೇಕು ಜಿಲ್ಲಾ ಕುಷ್ಠರೋಗ ನಿಯಂತ್ರಣ ಕಾರ್ಯಕ್ರಮಾಧಿಕಾರಿ ಡಾ.ಆನಂದ್.ಎನ್ ಅವರು ಹೇಳಿದರು. ಸಭೆಯಲ್ಲಿ ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ.ಗೋಪಿನಾಥ್ ಇತರರು ಇದ್ದರು.