ಮಡಿಕೇರಿ ಫೆ.3 : ನಮ್ಮೊಂದಿಗೆ ಇರುವವರ ನೆಮ್ಮದಿ ಮತ್ತು ಶಾಂತಿಯೇ ಸಾಹಿತ್ಯವಾಗಿದ್ದು, ಪರಸ್ಪರ ಸೌಹಾರ್ದತೆಯೇ ಅದರ ಅಂತಿಮ ಗುರಿಯಾಗಿದೆಯೆಂದು ಕುಶಾಲನಗರ ತಾಲ್ಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಹಿರಿಯ ಸಾಹಿತಿ ಬಿ.ಆರ್. ನಾರಾಯಣ ಅವರು ಅಭಿಪ್ರಾಯಿಸಿದ್ದಾರೆ. ನಗರದ ರೈತ ಸಹಕಾರ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿತ ‘ಕನ್ನಡ ಸಾಹಿತ್ಯ ಸಮ್ಮೇಳನ’ದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಿಜ ಜೀವನದ ಎಲ್ಲ ವಿಚಾರಗಳು, ಘಟನೆಗಳು ಸಾಹಿತ್ಯವಾಗಬಲ್ಲುದು. ಹಾಗೆಯೇ ಓದು, ಬರಹ ಅರಿಯದ ನಿಷ್ಕಳಂಕ, ಶ್ರಮ ಜೀವಿಗಳ ಬದುಕೇ ಒಂದು ಸಾಹಿತ್ಯವಾಗಿದೆ. ಏಕೆಂದರೆ ಸಾಹಿತ್ಯವೆನ್ನುವುದು ಜೀವನದ ಪ್ರತಿಬಿಂಬವೆಂದು ನುಡಿದರು. ಕನ್ನಡ ಸಾಹಿತ್ಯ ಭಂಡಾರ ಅತ್ಯಂತ ಪ್ರಬುದ್ಧ ಕೃತಿಗಳಿಂದ ತುಂಬಿ ತುಳುಕುತ್ತಿದೆ. ಹಳೆಗನ್ನಡ ರಚನೆಗಳಿಂದ ತೊಡಗಿ, ನಡುಗನ್ನಡ, ಹೊಸಗನ್ನಡ, ವಚನ ಸಾಹಿತ್ಯ, ದಾಸ ಸಾಹಿತ್ಯ, ನವೋದಯ, ಪ್ರಗತಿಶೀಲ, ದಲಿತ ಬಂಡಾಯದವರೆಗೆ ಕನ್ನಡ ಸಾಹಿತ್ಯ ಹರಿದು ಬಂದಿದ್ದು, ವೈವಿಧ್ಯಮಯವಾದ ಸಾಹಿತ್ಯ ಕೃತಿಗಳು ಮೂಡಿ ಬಂದಿವೆ. ಕನ್ನಡ ಸಾಹಿತ್ಯಕ್ಕೆ ಇಲ್ಲಿಯವರೆಗೆ 8 ಜ್ಞಾನ ಪೀಠ ಪ್ರಶಸ್ತಿಗಳು ಲಭ್ಯವಾಗಿದೆಯೆಂದು ಹೆಮ್ಮೆಯಿಂದ ನುಡಿದರು. ಕನ್ನಡ ಭಾಷೆಗೆ ಪುರಾತನ ಹಿನ್ನೆಲೆ ಇದ್ದು, ಶ್ರೀಮಂತ ಭಾಷೆ ಎನ್ನುವ ಅಭಿಮಾನವಿದ್ದರು, ಜಾಗತಿಕ ಮನ್ನಣೆ ಪಡೆಯಲು ಸಾಧ್ಯವಾಗಿಲ್ಲ ಎಂಬುದು ವಿಷಾದನೀಯ. ಸಾಹಿತ್ಯ ಹಾಗೂ ಇತರೆ ರಂಗಗಳಲ್ಲಿನ ಸಾಧನೆಗಳನ್ನು ಪುರಸ್ಕರಿಸುವ ಗರಿಷ್ಠ ಪಾರಿತೋಷಕವನ್ನು ಪಡೆಯಲು ನಮಗೆ ಇದುವರೆಗೆ ಸಾಧ್ಯವಾಗಿಲ್ಲವೆನ್ನುವ ಬೇಸರವನ್ನು ಅವರು ವ್ಯಕ್ತಪಡಿಸಿದರು. ಕೊಡಗಿನ ಸಾಹಿತಿಗಳು ಕನ್ನಡದ ಶ್ರಿಮಂತಿಕೆಯನ್ನು ಹೆಚ್ಚಿಸುವಲ್ಲಿ ಕೊಡುಗೆಯನ್ನು ನೀಡಿದ್ದು, ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ, ಬಿ.ಎಸ್.ಕುಶಾಲಪ್ಪ, ಕೊಡಗಿನ ಗೌರಮ್ಮ, ಭಾರತೀಸುತ, ಬಿ.ಡಿ.ಗಣಪತಿ, ಜಿ.ಟಿ.ನಾರಾಯಣರಾವ್, ವಿ.ಎಸ್.ರಾಮಕೃಷ್ಣ ಮೊದಲಾದವರ ಸಾಹಿತ್ಯಿಕ ಕೊಡುಗೆಗಳನನ್ನು ಬಿ.ಆರ್.ನಾರಾಯಣ ಅವರು ಉಲ್ಲೇಖಿಸಿದರು. ‘ದಂಡ’ ಕನ್ನಡಕ್ಕೆ ಅವಮಾನ- ಕೆಲವು ಆಂಗ್ಲ ವಿದ್ಯಾಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಆಂಗ್ಲ ಭಾಷೆಯಲ್ಲೇ ಮಾತನಾಡಬೇಕೆನ್ನುವ ನಿಯಮ ವಿಧಿಸಿ, ಕನ್ನಡದಲ್ಲಿ ಮಾತನಾಡಿದರೆ ದಂಡ ವಿಧಿಸಲಾಗುತ್ತಿತ್ತು. ಇಂತಹ ನಿಯಮಗಳು ಇರಬಾರದು. ಕನ್ನಡಕ್ಕೆ ದಂಡ ಎಂದರೆ ಅದು ಭಾಷೆಗೆ ಮಾಡುವ ಅಪಮಾನವೆಂದು ತೀಕ್ಷ÷್ಣವಾಗಿ ನುಡಿದರು. ಕಲಿಕಾ ಕೇಂದ್ರಗಳು ಬರಲಿ- ಕೊಡಗಿಗೆ ಪ್ರಸ್ತುತ ಅಸ್ಸಾಂ, ಮಧ್ಯ ಪ್ರದೇಶ, ಉತ್ತರ ಪ್ರದೇಶ, ಮಾದಲಾದೆಡೆಗಳಿಂದ ಕಾರ್ಮಿಕರು ವಲಸೆ ಬರುತ್ತಿದ್ದು, ಅವರಿಗೆ ಇತರೆ ಭಾಷೆಗಳ ಅರಿವಿಲ್ಲ. ಈ ಹಿನ್ನೆಲೆ ಅಂತಹವರಿಗೆ ಕನ್ನಡ ಕಲಿಕಾ ಕೇಂದ್ರಗಳ ಅಗತ್ಯವಿದೆ. ಇದರ ಕುರಿತು ಪರಿಷತ್ತು ಗಮನ ಹರಿಸಬೇಕೆಂದು ಮನವಿ ಮಾಡಿದರು. ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟಿಸಿದರು. ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್, ತಾಲ್ಲೂಕು ಕಸಾಪ ಅಧ್ಯಕ್ಷ ಕೆ.ಎಸ್. ಮೂರ್ತಿ, ಕುಶಾಲನಗರ ಪುರಸಭೆ ಅಧ್ಯಕ್ಷರಾದ ಬಿ.ಜಯವರ್ಧನ್ , ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಲೋಕೇಶ್ ಸಾಗರ್, ಜಿಲ್ಲಾ ಕಸಾಪ ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮದ್, ತಾಲ್ಲೂಕು ಕಸಾಪ ಮಾಜಿ ಅಧ್ಯಕ್ಷ ಟಿ.ಜಿ. ಪ್ರೇಮ ಕುಮಾರ್, ಜಿಲ್ಲಾ ಕಸಾಪ ಕಾರ್ಯದರ್ಶಿ ರೇವತಿ ರಮೇಶ್, ಸೋಮವಾರಪೇಟೆ ತಾಲ್ಲೂಕು ಕಸಾಪ ಅಧ್ಯಕ್ಷ ಎಸ್.ಡಿ.ವಿಜೇತ ಸೇರಿದಂತೆ ಹಲ ಗಣ್ಯರು ಪಾಲ್ಗೊಂಡಿದ್ದರು.
ಕುಶಾಲನಗರ ತಾಲ್ಲೂಕು ರಚನೆಯಾದ ಬಳಿಕ ನಡೆಯುತ್ತಿರುವ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷ ಬಿ.ಆರ್. ನಾರಾಯಣ ಅವರ ಮೆರವಣಿಗೆ , ವೈವಿಧ್ಯಮಯ ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ನಡೆಯುವ ಮೂಲಕ ಗಮನ ಸೆಳೆಯಿತು. ನಗರದ ಕೊಪ್ಪ ಗಡಿ ಭಾಗದ ಕಾವೇರಿ ನದಿ ದಂಡೆಯಿಂದ ಮುಖ್ಯರಸ್ತೆ ಮೂಲಕ ರೈತ ಸಹಕಾರ ಭವನದ ವೇದಿಕೆ ತನಕ ವಿವಿಧ ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ಮೆರವಣಿಗೆ ನಡೆಯಿತು. ತೆರೆದ ವಾಹನದಲ್ಲಿ ಸಮ್ಮೇಳನಾಧ್ಯಕ್ಷರಾದ ಬಿ.ಆರ್. ನಾರಾಯಣ, ಕ್ಷೇತ್ರದ ಶಾಸಕರಾದ ಎಂ.ಪಿ. ಅಪ್ಪಚ್ಚು ರಂಜನ್, ಜಿಲ್ಲಾ ಕಸಪಾ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್, ತಾಲ್ಲೂಕು ಕಸಾಪ ಅಧ್ಯಕ್ಷ ಕೆ.ಎಸ್. ಮೂರ್ತಿ ಅವರ ಮೆರವಣಿಗೆ ಗಮನ ಸೆಲೆಯಿತು. ಇಂದು ಬೆಳಗ್ಗೆ 8 ಗಂಟೆಗೆರೈತ ಸಹಕಾರ ಭವನದ ಆವರಣದಲ್ಲಿ ಕುಶಾಲನಗರ ಪುರಸಭೆ ಅಧ್ಯಕ್ಷರಾದ ಬಿ.ಜಯವರ್ಧನ್ ರಾಷ್ಟç ದ್ವಜಾರೋಹಣ, ಜಿಲ್ಲಾಧ್ಯಕ್ಷರಾದ ಎಂ.ಪಿ.ಕೇಶವ ಕಾಮತ್ ಕನ್ನಡ ಸಾಹಿತ್ಯ ಪರಿಷತ್‌ನ ಧ್ವಜವನ್ನು ಹಾಗೂ ಕನ್ನಡ ಧ್ವಜಾರೋಹಣವನ್ನು ತಾಲ್ಲೂಕು ಕಸಾಪ ಅಧ್ಯಕ್ಷ ಕೆ.ಎಸ್.ಮೂರ್ತಿ ನೆರವೇರಿಸುವ ಮೂಲಕ ಸಾಹಿತ್ಯ ಸಮ್ಮೇಳನದ ಸಂಭ್ರಮಕ್ಕೆ ಚಾಲನೆ ದೊರಕಿತು. ವಿಚಾರಗೋಷ್ಠಿಗಳು- ಸಮ್ಮೇಳನದ ಅಂಗವಾಗಿ ಮಧ್ಯಾಹ್ನ ಕುಶಾಲನಗರ ವಕೀಲರ ಸಂಘದ ಅಧ್ಯಕ್ಷರಾದ ಆರ್.ಕೆ ನಾಗೇಂದ್ರಬಾಬು ಅಧ್ಯಕ್ಷತೆಯಲ್ಲಿ ‘ಕುಶಾಲನಗರ ತಾಲ್ಲೂಕಿನ ಅಭಿವೃದ್ಧಿಯ ಆಶೋತ್ತರಗಳು’ ವಿಷಯದ ಬಗ್ಗೆ ವಿ.ಪಿ. ಶಶಿಧರ್ ಮಾತನಾಡಿದರೆ, ‘ಕುಶಾಲನಗರ ತಾಲ್ಲೂಕಿನ ಸಾಹಿತಿಗಳ ಅವಲೋಕನ’ ವಿಷಯದ ಬಗ್ಗೆ ಉಪನ್ಯಾಸಕ ಮೇ.ನ. ವೆಂಕಟನಾಯಕ, ‘ಗ್ರಾಮೀಣ ಮಹಿಳೆ ಮತ್ತು ಸಬಲೀಕರಣ’ ವಿಷಯದ ಬಗ್ಗೆ ಹೆಚ್. ರೋಹಿತ್ ಉಪನ್ಯಾಸ ನೀಡಿದರು. ಕವಿಗೋಷ್ಠಿ ಚುಟುಕು ಕವಿ ಹಾ.ತಿ.ಜಯಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆಯಿತು.