ಮಡಿಕೇರಿ ಫೆ.3 : ಕೊಡಗು ಜಿಲ್ಲೆಯ ಸಾರ್ವಜನಿಕರು ಮನೆ ಹಾಗೂ ಅಂಗಡಿ ಮಳಿಗೆಗಳಿಗೆ ಸಿಸಿ ಕ್ಯಾಮೆರಾ, ಡೋರ್ ಅಲಾರಂ, ಸೆನ್ಸಾರ್ ಫ್ರೇಮ್‌ಗಳನ್ನು ಅಳವಡಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮನವಿ ಮಾಡಿದ್ದಾರೆ. ಬೀಗ ಹಾಕಿಕೊಂಡು ಬೇರೆ ಊರುಗಳಿಗೆ ತೆರಳುವ ಸಂದರ್ಭ ಯಾವುದೇ ಬೆಲೆ ಬಾಳುವ ಸೊತ್ತುಗಳು, ನಗದು, ಚಿನ್ನಾಭರಣಗಳನ್ನು ಮನೆ ಹಾಗೂ ಅಂಗಡಿಯಲ್ಲಿಡಬಾರದು. ತೆರಳುವ ಸಂದರ್ಭದಲ್ಲಿ ತಮ್ಮ ಮನೆಗಳಲ್ಲಿ ಪರಿಚಯಸ್ಥರನ್ನು ಉಳಿದುಕೊಳ್ಳುವ ಬಗ್ಗೆ ನೋಡಿಕೊಳ್ಳುವುದು. ಸಾರ್ವಜನಿಕರು ಅಂಗಡಿ ಹಾಗೂ ಮನೆಗೆ ಬೀಗ ಹಾಕಿಕೊಂಡು ಹೋಗುವ ವೇಳೆ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ 112 ಇಂಡಿಯಾ ಎಂಬ ತಂತ್ರಾಂಶವನ್ನು ತಯಾರಿಸಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಅಪರಾಧಗಳನ್ನು ತಡೆಗಟ್ಟುವಲ್ಲಿ ಪೊಲೀಸರೊಂದಿಗೆ ಸಹಕರಿಸಬೇಕೆಂದು ಪೊಲೀಸ್ ವರಿಷ್ಠಾಧಿಕಾರಿ ಕೋರಿಕೊಂಡಿದ್ದಾರೆ.














