ಮಡಿಕೇರಿ ಫೆ.4 : ಹಿಂದೂ ಸಂಘಟನೆಗಳ ಇಬ್ಬರು ಪ್ರಮುಖರ ವಿರುದ್ಧ ಗಡಿಪಾರು ಪ್ರಸ್ತಾಪ ಮಾಡಿರುವ ಕ್ರಮವನ್ನು ವಿರೋಧಿಸಿ ಹಿಂದೂ ಜಾಗರಣಾ ವೇದಿಕೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸೋಮವಾರಪೇಟೆಯಲ್ಲಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಪುಟ್ಟಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಪ್ರಮುಖರು ಕವನ್ ಕಾವೇರಪ್ಪ ಹಾಗೂ ವಿನಯ್ ಕುಮಾರ್ ವಿರುದ್ಧದ ಗಡಿಪಾರು ಪ್ರಸ್ತಾಪವನ್ನು ಕೈಬಿಡದಿದ್ದರೆ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ಹಿಂದೂ ಜಾಗರಣಾ ವೇದಿಕೆಯ ಸೋಮವಾರಪೇಟೆ ತಾಲ್ಲೂಕು ಸಂಚಾಲಕ ರಂಜನ್ ಗೌಡ ಮಾತನಾಡಿ ದೇಶದ್ರೋಹದಂತಹ ಅಪರಾಧ ಪ್ರಕರಣಗಳು ಜಿಲ್ಲೆಯಲ್ಲಿ ನಡೆಯುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ದೇಶಭಕ್ತ ಹಿಂದೂ ಕಾರ್ಯಕರ್ತರ ವಿರುದ್ಧ ಮಾತ್ರ ಕ್ರಮ ಕೈಗೊಳ್ಳುತ್ತಿದೆ. ಕೇಸರಿ ಮುಖವಾಡ ತೊಟ್ಟಿರುವ ಕೆಲವರು ಹಿಂದೂ ಸಂಘಟನೆಗಳ ಧ್ವನಿಯನ್ನು ದಮನ ಮಾಡಲು ನೋಡುತ್ತಿವೆ ಎಂದು ಆರೋಪಿಸಿದರು.
ಭ್ರಷ್ಟಾಚಾರವನ್ನು ನಿಗ್ರಹಿಸಲಾಗದವರು ದೇಶಭಕ್ತ ಹಿಂದೂ ಕಾರ್ಯಕರ್ತರ ವಿರುದ್ಧ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಮುಖರಾದ ಬೋಜೇಗೌಡ, ಸುಭಾಷಿಮ್ಮಯ್ಯ, ಉಮೇಶ್, ಸುನಿಲ್ ಮಾದಪ್ಪ, ತಾಲೂಕು ಪದಾಧಿಕಾರಿಗಳಾದ ವಿನು, ಗಿರೀಶ್, ಮಾದಪ್ಪ, ವಿಶ್ವ ಹಿಂದೂ ಪರಿಷತ್ ನ ಹುಲ್ಲೂರಿಕೊಪ್ಪ ಚಂದ್ರು, ಕೆ.ಜಿ.ಸುರೇಶ್, ಬಿಜೆಪಿಯ ದರ್ಶನ್ ಜೋಯಪ್ಪ, ರೂಪಸತೀಶ್, ದೀಪಕ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.