ಮಡಿಕೇರಿ ಫೆ.4 : ಕೊಡಗು ಜಿಲ್ಲಾ ಒಕ್ಕಲಿಗರ ಯುವ ವೇದಿಕೆ ವತಿಯಿಂದ ಶನಿವಾರಸಂತೆಯ ಗುಡುಗಳಲೆ ಗ್ರಾಮದಲ್ಲಿ ರಕ್ತದಾನ ಶಿಬಿರ ನಡೆಯಿತು.
ಬಸಪ್ಪ ಕಲ್ಯಾಣ ಮಂಟಪದಲ್ಲಿ ನಡೆದ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಮನೆಹಳ್ಳಿ ಮಠದ ಶ್ರೀಮಹಾಂತ ಶಿವಲಿಂಗ ಸ್ವಾಮೀಜಿ, ಸಾರ್ವಜನಿಕರು ರಕ್ತದಾನ ಮಾಡಿ ಜೀವ ಉಳಿಸಬೇಕು. ಈ ರೀತಿಯ ಸಾಮಾಜಿಕ ಕಳಕಳಿಯ ಶಿಬಿರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.
ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ಕರುಂಬಯ್ಯ ಮಾತನಾಡಿ ರಕ್ತಕ್ಕೆ ಯಾವುದೇ ಪರ್ಯಾಯ ವ್ಯವಸ್ಥೆಗಳಿಲ್ಲ. ಆದ್ದರಿಂದ ರಕ್ತದಾನ ಶಿಬಿರವನ್ನು ಹಮ್ಮಿಕೊಂಡು ರಕ್ತದ ಅಭಾವವನ್ನು ನೀಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳು ನಮ್ಮೊಂದಿಗೆ ಕೈಜೋಡಿಸಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಯುವ ವೇದಿಕೆಯ ಅಧ್ಯಕ್ಷ ಗಿರೀಶ್ ಮಲ್ಲಪ್ಪ, ಮುಂದಿನ ದಿನಗಳಲ್ಲಿಯು ಈ ರೀತಿಯ ಆರೋಗ್ಯ ಶಿಬಿರ ಮತ್ತು ಜನೋಪಯೋಗಿ ಚಟುವಟಿಕೆಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
ವೇದಿಕೆಯ ನಿರ್ದೇಶಕ ರಕ್ಷಿತ್ ಶನಿವಾರಸಂತೆ, ನಿವೃತ್ತ ಯೋಧ ಪಿ.ಹೆಚ್.ಮಹೇಶ್, ಭರತ್ ಮತ್ತಿತರರು ಉಪಸ್ಥಿತರಿದ್ದರು. ಗೌರವ ಕಾರ್ಯದರ್ಶಿ ನವೀನ್ ಅಜ್ಜಳ್ಳಿ ಸ್ವಾಗತಿಸಿ, ನಿರ್ದೇಶಕ ಹಾಗೂ ಮಾಧ್ಯಮ ವಕ್ತಾರ ಎಂ.ಧನಂಜಯ ವಂದಿಸಿದರು. ಶಿಬಿರದಲ್ಲಿ 45ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದರು.