ವಿರಾಜಪೇಟೆ ಫೆ.4 : ಅರಣ್ಯ ಇಲಾಖೆ ಹಾಗೂ ಸಮೀಪದ ಬೇಟೋಳಿ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಗ್ರಾಮದ ವ್ಯಾಪ್ತಿಯ ಮಾಕುಟ್ಟ ಅರಣ್ಯ ಪ್ರದೇಶದಲ್ಲಿ ಕೇರಳದಿಂದ ಕಸವನ್ನು ತಂದು ಸುರಿಯುತ್ತಿದ್ದ ವಾಹನವನ್ನು ತಡೆದು ಚಾಲಕರಿಗೆ ದಂಡ ವಿಧಿಸಿದ್ದಾರೆ.
ಶನಿವಾರ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಕೇರಳದ ಕಡೆಯಿಂದ ಸರಕು ಸಾಗಾಣಿಕೆ ವಾಹನದಲ್ಲಿ ಚೀಲದಲ್ಲಿ ಕಸವನ್ನು ತಂದು ಸುರಿಯುತ್ತಿದ್ದ ವಿನೋದ್ ಹಾಗೂ ಬಿಜು ಎಂಬುವವರಿಗೆ ರೂ.5 ಸಾವಿರ ದಂಡ ವಿಧಿಸಿ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಕೇರಳದ ಕಡೆಯಿಂದ ಸರಕು ಸಾಗಾಣಿಕೆ ವಾಹನದಲ್ಲಿ ಚೀಲದಲ್ಲಿ ಕಸವನ್ನು ತಂದು ಮಾಕುಟ್ಟ ಅರಣ್ಯ ಪ್ರದೇಶದಲ್ಲಿ ಸುರಿಯುತ್ತಿದ್ದ ಪಾಷ ಎಂಬಾತನಿಗೂ ಅಧಿಕಾರಿಗಳು ರೂ.5 ಸಾವಿರ ದಂಡ ವಿಧಿಸಿ ಎಚ್ಚರಿಕೆ ನೀಡಿದ್ದಾರೆ.
ಸರಕು ಸಾಗಾಣಿಕೆಯ ವಾಹನಗಳ ಕೆಲ ಚಾಲಕರು ರಾಜ್ಯದಿಂದ ಕೇರಳಕ್ಕೆ ಸರಕನ್ನು ಸಾಗಿಸಿ ಹಿಂದಿರುಗಿ ಬರುವಾಗ ಕೇರಳ ರಾಜ್ಯದಿಂದ ಹಣದ ಆಸೆಗಾಗಿ ಕಸವನ್ನು ತಂದು ಮಾಕುಟ್ಟ ಅರಣ್ಯ ಪ್ರದೇಶದಲ್ಲಿ ಸುರಿಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಕಸದ ರಾಶಿಯಲ್ಲಿ ಪ್ಲಾಸ್ಟಿಕ್, ವಿಷಕಾರಿ ತ್ಯಾಜ್ಯಗಳು ಸೇರಿದಂತೆ ಮದ್ಯದ ಬಾಟಲಿಗಳು ಸಾಕಷ್ಟು ಪ್ರಮಾಣದಲ್ಲಿ ಪತ್ತೆಯಾಗಿವೆ.
ಕೇರಳದಿಂದ ವಿಷಕಾರಿ ತ್ಯಾಜ್ಯಗಳನ್ನು ತಂದು ಮಾಕುಟ್ಟದ ಅರಣ್ಯ ಸೇರಿದಂತೆ ಇತರೆಡೆಗಳಲ್ಲು ಸಾಕಷ್ಟು ತ್ಯಾಜ್ಯವನ್ನು ಸುರಿಯುತ್ತಿರುವ ಬಗ್ಗೆ ಕೆಲವು ವರ್ಷಗಳಿಂದಲೂ ದೂರು ಕೇಳಿಬರುತ್ತಿತ್ತು. ಆದರೆ ಇತ್ತೀಚಿಗೆ ಕೆಲವು ದಿನಗಳ ಹಿಂದೆ ಈ ಕುರಿತು ಸಾಮಾಜಿಕ ಜಾಲಗಳಲ್ಲಿ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತಗೊಂಡಿತ್ತು. ಇದರಿಂದ ಎಚ್ಚೆತ್ತ ಅಧಿಕಾರಿಗಳು ಕೆಲವು ದಿನಗಳಿಂದ ಕಾರ್ಯಾಚರಣೆ ನಡೆಸಿ ಅರಣ್ಯ ಪ್ರದೇಶದಲ್ಲಿ ಕಸ ಸುರಿಯುತ್ತಿರುವವ ವಿರುದ್ಧ ಕ್ರಮಕೈಗೊಳ್ಳುತ್ತಿದ್ದಾರೆ.
ಮಾಕುಟ್ಟದಲ್ಲಿ ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ಒಂದು ಇದ್ದರೂ ಕೂಡ ಅಲ್ಲಿನ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿಗಳು ರಾಜ್ಯ ಪ್ರವೇಶಿಸುವ ಕನಿಷ್ಠ ಸರಕು ಸಾಗಾಣಿಕ ವಾಹನಗಳನ್ನು ಕೂಡ ತಪಾಸಣೆ ನಡೆಸದೇ ರಾಜ್ಯ ಪ್ರವೇಶಕ್ಕೆ ಅವಕಾಶ ನೀಡುತ್ತಿರುವುದರಿಂದಲೇ ಈ ಸಮಸ್ಯೆ ಉದ್ಭವವಾಗುತ್ತಿದೆ. ಇಲಾಖೆಯ ತಪಾಸಣಾ ಕೇಂದ್ರದಲ್ಲಿ ತಪಾಸಣೆ ನಡೆಸಿ, ಸೂಕ್ತ ಕ್ರಮಕೈಗೊಂಡಿದ್ದರೆ ಈ ಸಮಸ್ಯೆ ಉಂಟಾಗುತ್ತಿರಲಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜತೆಗೆ ವಿರಾಜಪೇಟೆ ಕಡೆಯಿಂದಲೂ ತ್ಯಾಜ್ಯವನ್ನು ಎಸೆಯಲೆಂದೆ ಕೆಲ ವಾಹನಗಳು ಮಾಕುಟ್ಟ ಕಡೆ ತೆರಳುತ್ತಿದು,್ದ ಈ ಬಗ್ಗೆಯು ನಿಗಾ ವಹಿಸಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.