ಮಡಿಕೇರಿ ಫೆ.5 : ಕೊಡಗಿನ ಗಡಿಭಾಗದ ಮಾಕುಟ್ಟ ಅರಣ್ಯದ ಸಮೀಪ ತ್ಯಾಜ್ಯಗಳನ್ನು ತಂದು ಸುರಿಯುತ್ತಿದ್ದ ಕೇರಳದ ಲಾರಿ ಮತ್ತು ಪಿಕ್ ಅಪ್ ವಾಹನವನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ವಶಕ್ಕೆ ಪಡೆದಿದ್ದಾರೆ.
ಜಿಲ್ಲೆಯ ಗಡಿಭಾಗದ ಅರಣ್ಯ ಪ್ರದೇಶದಲ್ಲಿ ಕೇರಳದ ತ್ಯಾಜ್ಯಗಳನ್ನು ತಂದು ಸುರಿಯುತ್ತಿರುವ ಪ್ರಕರಣಗಳನ್ನು ಇತ್ತೀಚೆಗೆ ಹೆಚ್ಚಾದ ಕಾರಣ ಪರಿಸರ ಪ್ರೇಮಿಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ತ್ಯಾಜ್ಯದಿಂದಾಗಿ ಪರಿಸರಕ್ಕೆ ಮತ್ತು ವನ್ಯಜೀವಿಗಳಿಗೆ ಹಾನಿಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಸ್ಥಳೀಯ ಗ್ರಾಮ ಪಂಚಾಯ್ತಿಗಳು ತೀವ್ರ ನಿಗಾ ವಹಿಸಿದ್ದವು. ಕಳೆದ ವಾರವಷ್ಟೆ ಕಸತುಂಬಿದ ಕೇರಳ ಟಿಪ್ಪರ್ ನ್ನು ವಶಕ್ಕೆ ಪಡೆಯಲಾಗಿತ್ತು.
ಇದೀಗ ಮತ್ತೆ 2 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಾಕುಟ್ಟದಲ್ಲಿ ಚೆಕ್‌ಪೋಸ್ಟ್ ಇದ್ದರೂ ನಿಯಮ ಬಾಹಿರವಾಗಿ ತ್ಯಾಜ್ಯ ತುಂಬಿದ ಕೇರಳದ ವಾಹನಗಳು ಕೊಡಗನ್ನು ಪ್ರವೇಶಿಸಲು ಹೇಗೆ ಸಾಧ್ಯ ಎಂದು ದಕ್ಷಿಣ ಕೊಡಗಿನ ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಅರಣ್ಯ ಪ್ರದೇಶದಲ್ಲಿ ತ್ಯಾಜ್ಯ ಸುರಿಯುವುದನ್ನು ತಡೆಯಲು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.














