ಮಡಿಕೇರಿ ಫೆ.6 : ಹೊದವಾಡ ಓಸೀಸ್ ಅರ್ಟ್ಸ್ ಅಂಡ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ 19ನೇ ವರ್ಷದ ಕೊಡಗು ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾವಳಿಯು ಮಾ.4 ರಿಂದ 12ರ ವರೆಗೆ ನಡೆಯಲಿದೆ ಎಂದು ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಎಸ್.ಆದಾಂ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಪಂದ್ಯಾವಳಿಯ ಧ್ವಜವನ್ನು ಆಯೋಜಕರಿಗೆ ಹಸ್ತಾಂತರಿಸಿ ಮಾತನಾಡಿದ ಅವರು, ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಪಂದ್ಯಾವಳಿ ನಡೆಯಲಿದ್ದು, ರಾಜ್ಯ ಹಾಗೂ ಜಿಲ್ಲಾ ಮಟ್ಟದ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಈಗಾಗಲೇ 80 ತಂಡಗಳು ನೊಂದಾಯಿಸಿಕೊಂಡಿದ್ದು, 150ಕ್ಕೂ ಹೆಚ್ಚು ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದರು. ಕೊಡಗು ಮುಸ್ಲಿಂ ಕಪ್‍ನ ಸ್ಥಪಕಾಧ್ಯಕ್ಷ ಕೆ.ಎ.ಅಬ್ದುಲ್ ರಶೀದ್ ಮಾತನಾಡಿ, ಈಗಾಗಲೇ ಪಂದ್ಯಾವಳಿಯ ಲೋಗೋ ಅನಾವರಣಗೊಳಿಸಲಾಗಿದ್ದು, ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುವುದೆಂದರು.
ಆಸಕ್ತ ತಂಡಗಳು ರೂ.1000 ಮುಂಗಡ ಹಣ ಪಾವತಿಸಿ ತಂಡದ ಹೆಸರು ನೋಂದಾಯಿಸಿಕೊಳ್ಳುವಂತೆ ಮನವಿ ಮಾಡಿದರು. ಇಲ್ಲಿಯವರೆಗೆ ನಡೆದ ಪಂದ್ಯಾವಳಿಗೆ ಸರ್ಕಾರದಿಂದ ಯಾವುದೇ ಅನುದಾನ ದೊರೆಯದೆ ಇರುವುದು ದುರಾದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಟ್ರಸ್ಟ್‌ನ ಅಧ್ಯಕ್ಷ ಎ.ಎ.ಅಬ್ದುಲ್ ಖಾದರ್, ಉಪಾಧ್ಯಕ್ಷ ಸಿ.ಎ.ಸಂಶುದ್ದೀನ್, ಹೊದವಾಡ ಓಸೀಸ್ ಅರ್ಟ್ಸ್ ಅಂಡ್ ಸ್ಪೋರ್ಟ್ಸ್ ಕ್ಲಬ್ ಉಪಾಧ್ಯಕ್ಷ ಎಂ.ಸುಹೈಲ್ ಹಾಗೂ ಪ್ರಧಾನ ಕಾರ್ಯದರ್ಶಿ ಶಿಯಾಬುದ್ಧೀನ್ ಉಪಸ್ಥಿತರಿದ್ದರು.









