Advertisement
2:26 AM Saturday 2-December 2023

ಲಂಚ ಪಡೆದ ಆರೋಪ : ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮೂವರನ್ನು ವಶಕ್ಕೆ ಪಡೆದ ಲೋಕಾಯುಕ್ತ

06/02/2023

ಮಡಿಕೇರಿ ಫೆ.6 : ಮಹಿಳಾ ಫಲಾನುಭವಿಯೊಬ್ಬರಿಂದ ಲಂಚದ ರೂಪದಲ್ಲಿ ರೂ.10 ಸಾವಿರ ಸ್ವೀಕರಿಸುತ್ತಿದ್ದ ಆರೋಪದಡಿ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ, ಓರ್ವ ನಿರ್ದೇಶಕಿ ಹಾಗೂ ವಾಹನ ಚಾಲಕನನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಿಗಮದ ವ್ಯವಸ್ಥಾಪಕ ಚಂದ್ರಶೇಖರ್, ಕಚೇರಿ ನಿರ್ದೇಶಕಿ ಚೆಲುವಾಂಬ ಹಾಗೂ ವಾಹನ ಚಾಲಕ ತಿರುಮಲೇಶ್ ಎಂಬುವವರನ್ನು ವಿಚಾರಣೆಗೊಳಪಡಿಸಲಾಗಿದೆ.
ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಸಬ್ಸಿಡಿ ಆಧಾರಿತ ಸಾಲ ಯೋಜನೆಯಡಿ ಮಹಿಳೆಯೋರ್ವರು ಕೋಳಿ ಅಂಗಡಿಗಾಗಿ 2021ರ ಅಕ್ಟೋಬರ್‌ನಲ್ಲಿ 3 ಲಕ್ಷ ರೂ. ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಮಹಿಳೆಗೆ ಮೊದಲ ಹಂತದ ಹಣ ಪಾವತಿಯಾಗಿತ್ತು. 2ನೇ ಹಂತದ 1 ಲಕ್ಷ ರೂ. ಹಣ ಬಿಡುಗಡೆಗೆ ಆರೋಪಿಗಳು 10 ಸಾವಿರ ರೂ.ಗಳ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಇದರಿಂದ ಮನನೊಂದ ಫಲಾನುಭವಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಸೋಮವಾರ ದೂರುದಾರರಿಂದ ಹಣ ಪಡೆಯುತ್ತಿದ್ದ ಸಂದರ್ಭ ಲೋಕಾಯುಕ್ತ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ದಾಳಿ ಮಾಡಿ ಮೂವರನ್ನು ಹಣ ಸಹಿತ ವಶಕ್ಕೆ ಪಡೆದಿದ್ದಾರೆ.
ಲೋಕಾಯುಕ್ತ ಎಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್, ಐ.ಜಿ.ಪಿ. ಸುಬ್ರಮಣ್ಯೇಶ್ವರ್ ರಾವ್ ನಿರ್ದೇಶನದಂತೆ ಮೈಸೂರು ಲೋಕಾಯುಕ್ತ ಎಸ್.ಪಿ ಸುರೇಶ್ ಬಾಬು ಮಾರ್ಗದರ್ಶನದಲ್ಲಿ ಕೊಡಗು ಲೋಕಾಯುಕ್ತ ಡಿವೈಎಸ್‌ಪಿ ಪವನ್ ಕುಮಾರ್, ಮಡಿಕೇರಿ ಲೋಕಾಯುಕ್ತ ಇನ್ಸ್ ಪೆಕ್ಟರ್ ಲೋಕೇಶ್, ಮೈಸೂರು ಲೋಕಾಯುಕ್ತ ಇನ್ಸ್ಪೆಕ್ಟರ್ ರೂಪಾಶ್ರೀ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು.