ಸೋಮವಾರಪೇಟೆ ಜ.7 : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿರುವ ಜಲಜೀವನ್ ಮಿಷನ್
ಯೋಜನೆಯಡಿ ಶಾಂತಳ್ಳಿ ಗ್ರಾ.ಪಂ ನ ಅನೇಕ ಗ್ರಾಮಗಳು ಸೇರಿದಂತೆ ಗೌಡಳ್ಳಿ ಗ್ರಾ.ಪಂ ನ ಶುಂಠಿ ಗ್ರಾಮದಲ್ಲಿ ಅಸಮರ್ಪಕ ಕಾಮಗಾರಿ ನಡೆಸಲಾಗಿದ್ದು, ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಶಾಂತಳ್ಳಿ ಗ್ರಾ.ಪಂ ವ್ಯಾಪ್ತಿಯ ಹರಗ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಪೈಪ್‍ಲೈನ್ ಅಳವಡಿಸಿ 2 ವರ್ಷ ಕಳೆದರೂ ಈವರೆಗೆ ನೀರಿನ ವ್ಯವಸ್ಥೆಯಾಗಿಲ್ಲ. ಬೇಸಿಗೆಯಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಎದುರಿಸುವಂತಾಗಿದ್ದು, ಲಕ್ಷಾಂತರ ರೂಪಾಯಿ ವೆಚ್ಚದ ಕಾಮಗಾರಿಯಲ್ಲಿ ಅವ್ಯವಹಾರವಾಗಿದೆ ಎಂದು ಶರಣ್ ಗೌಡ, ಡಾಲಿ ಪ್ರಕಾಶ್ ಸೇರಿದಂತೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ತಲ್ತರೆಶೆಟ್ಟಳ್ಳಿಯ ಉದ್ರಳ್ಳಿಯಲ್ಲೂ ಇದೇ ಪರಿಸ್ಥಿತಿ ಬಂದಿದೆ. ಕಳೆದ 2 ವರ್ಷಗಳಿಂದ ಮನವಿ ನೀಡುತ್ತ ಬಂದಿದ್ದರೂ ಈವರೆಗೆ ಕ್ರಮವಹಿಸಿಲ್ಲ. ಅಳವಡಿಸಿರುವ ಪೈಪ್‍ಲೈನ್ ಕಾಮಗಾರಿಯೂ ಕಳಪೆಯಾಗಿದೆ. ಟ್ಯಾಂಕ್‍ಗೆ ನೀರು ಹಕುತ್ತಿಲ್ಲ ಎಂದು ಬಗ್ಗನ ಅನಿಲ್‍ಕುಮಾರ್, ಡಾಲಿ ಪ್ರಕಾಶ್, ಜೀವನ್, ಸುಖಾಂತ್, ರವಿ, ಚನ್ನಕೇಶವ ಅಸಮಾಧಾನ ವ್ಯಕ್ತಪಡಿಸಿದರು.
ಗೌಡಳ್ಳಿಯ ಶುಂಠಿ ಗ್ರಾಮದಲ್ಲಿ ನಿರ್ಮಿಸಿರುವ ನೀರಿನ ಟ್ಯಾಂಕ್‍ನಲ್ಲಿ ಈಗಾಗಲೇ ನೀರು ಸೋರಿಕೆಯಾಗಿದ್ದು, ಕಾಮಗಾರಿ ನಡೆಯುವ ಸಂದರ್ಭ ಯಾವೊಬ್ಬ ಅಭಿಯಂತರರೂ ಭೇಟಿ ನೀಡಿ ಪರಿಶೀಲಿಸಿಲ್ಲ. ಸೋರಿಕೆಯಾಗುತ್ತಿರುವ ಟ್ಯಾಂಕ್‍ನ್ನು ಒಡೆದು ಹಾಕಿ ನೂತನ ಟ್ಯಾಂಕ್ ನಿರ್ಮಿಸಬೇಕು, ಕಾಮಗಾರಿ ನಡೆಸಿದ ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸಬೇಕೆಂದು ಗ್ರಾಮಸ್ಥರಾದ ಚರಣ್ ಸೇರಿದಂತೆ ಇತರರು ಆಗ್ರಹಿಸಿದರು.
ಪ್ರತಿಕ್ರಿಯೆ ನೀಡಿದ ಜಿ.ಪಂ ಕಾರ್ಯಪಾಲಕ ಅಭಿಯಂತರ ದೇವಾನಂದ್ ಅವರು, ಜಲಜೀವನ್ ಮಿಷನ್ ಯೋಜನೆಯಡಿ ಸಮಸ್ಯೆಗಳು ಬಂದಿರುವ ಕಡೆಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ಶುಂಠಿ ಗ್ರಾಮದ ಟ್ಯಾಂಕ್‍ಗೆ ನೀರು ತುಂಬಿಸಿ ಸೋರಿಕೆ ಕಂಡುಬಂದರೆ ಟ್ಯಾಂಕ್‍ನ್ನು ಒಡೆದು ನೂತನ ಟ್ಯಾಂಕ್ ನಿರ್ಮಿಸಲು ಕ್ರಮ ವಹಿಸಲಾಗುವುದು. ಹರಗ, ತಲ್ತರೆಶೆಟ್ಟಳ್ಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದೆಂದು ಭರವಸೆ ನೀಡಿದರು.