Advertisement
4:28 AM Friday 8-December 2023

ಬೆಟ್ಟಗೇರಿ : ನಿರ್ಜನ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಒತ್ತಾಯ

07/02/2023

ಮಡಿಕೇರಿ ಫೆ.7 : ಬೆಟ್ಟಗೇರಿ ಗ್ರಾ.ಪಂ ವ್ಯಾಪ್ತಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಒಣ, ಹಸಿ, ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ಜನ ಪ್ರದೇಶದಲ್ಲಿ ನಿರ್ಮಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಪ್ರಸ್ತುತ ಘಟಕ ಸ್ಥಾಪನೆಗೆ ಬೆಟ್ಟಗೇರಿ ಗ್ರಾಮದ ಹೃದಯ ಭಾಗದಲ್ಲಿರುವ ಹಳೆಯ ಪಶು ಚಿಕಿತ್ಸಾ ಕೇಂದ್ರದ ಸಮೀಪದ ಜಾಗ ಗುರುತಿಸಲಾಗಿದೆ ಎಂದು ತಿಳಿದು ಬಂದಿದೆ. ಇದರ ಮುಂಭಾಗದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ, ಹಿಂಭಾಗದಲ್ಲಿ ನೂತನ ಪಶು ಚಿಕಿತ್ಸಾ ಕೇಂದ್ರ, ಬಲಬದಿಯಲ್ಲಿ ಊರಿನ ಭಗವತಿ ದೇವಸ್ಥಾನಕ್ಕೆ ಹೋಗುವ ರಸ್ತೆ, ನೂರಾರು ಮನೆ ಹಾಗೂ ಊರಿನ ಅಂಬಲವಿದೆ. ಎಡಭಾಗದಲ್ಲಿ ರಾಷ್ಟ್ರೀಯ ಬ್ಯಾಂಕ್ ಮತ್ತು ಖಾಸಗಿ ವೈದ್ಯಕೀಯ ಚಿಕಿತ್ಸಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.

ಶಾಲೆಗೆ ತೆರಳುವ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ. ಊರಿನ ಧಾರ್ಮಿಕ ಕೇಂದ್ರವು ಉದ್ದೇಶಿತ ಜಾಗದ ಪಕ್ಕದಲ್ಲೇ ಇದೆ, ಪ್ರತಿನಿತ್ಯ ಸಾವಿರಾರು ಮಂದಿ ಸಂಚರಿಸುತ್ತಾರೆ. ಇಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಗೊಂಡರೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿಗಳು ಹಾಗೂ ಗ್ರಾ.ಪಂ ಗಮನ ಸೆಳೆದಿದ್ದಾರೆ.

ಸಿ ಮತ್ತು ಡಿ ತ್ಯಾಜ್ಯ ನಿರ್ವಹಣಾ ನಿಯಮ 2016, ಸರ್ಕಾರದ ಆದೇಶ ಸಂಖ್ಯೆ ಯುಡಿಡಿ 90 ಸಿಎಸ್‍ಎಸ್ 2018 ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಾರ್ಗಸೂಚಿಯನ್ವಯ ಒಣ, ಹಸಿ, ಘನ ತ್ಯಾಜ್ಯ ವಿಲೇವಾರಿ ಘಟಕವನ್ನು ಊರಿನಿಂದ ದೂರದಲ್ಲಿ ಅಥವಾ ನಿರ್ಜನ ಪ್ರದೇಶದಲ್ಲಿ ಸ್ಥಾಪಿಸಬೇಕೆಂಬ ನಿಯಮವಿದ್ದು, ಇದನ್ನು ಗ್ರಾ.ಪಂ ಪಾಲಿಸಬೇಕೆಂದು ಒತ್ತಾಯಿಸಿದ್ದಾರೆ.