ಮಡಿಕೇರಿ ಫೆ.7 : ಕೊಡಗು ಐರಿ ಸಮಾಜ ಸಹಯೋಗದಲ್ಲಿ ಕೊಡಗಿನ ಐರಿ ಜನಾಂಗದ ಮಧ್ಯೆ ಏ.22 ಮತ್ತು 23 ರಂದು 9ನೇ ವರ್ಷದ ಕೌಟುಂಬಿಕ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ ಎಂದು ಆಯೋಜನಾ ಸಮಿತಿ ಸಂಚಾಲಕ ಐಮಂಡ ಗೋಪಾಲ್ ಸೋಮಯ್ಯ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ನಗರದ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಪಂದ್ಯಾವಳಿ ನಡೆಯಲಿದ್ದು, ಐರಿ ಮಕ್ಕಡ ಕೂಟ ಆತಿಥ್ಯವಹಿಸಲಿದೆ ಎಂದು ತಿಳಿಸಿದರು.
ಈ ಬಾರಿ ಬಹಳ ವಿಭಿನ್ನವಾಗಿ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ಕ್ರಿಕೆಟ್ ಮಾತ್ರವಲ್ಲದೆ ಮಹಿಳೆಯರಿಗೆ ಹಗ್ಗ ಜಗ್ಗಾಟ, ಜನಾಂಗದ ಹೆಣ್ಣುಮಕ್ಕಳಿಗೆ ಪ್ರದರ್ಶನ ಕ್ರಿಕೆಟ್ ಪಂದ್ಯಾಟ ಹಾಗೂ ಇತರ ಆಟೋಟ ಸ್ಪರ್ಧೆಗಳು ನಡೆಯಲಿವೆ. ಅಲ್ಲದೆ ಪುರುಷರಿಗೆ ಮತ್ತು ಮಹಿಳೆಯರಿಗೆ 100 ಮೀ. ಓಟ, ಹಿರಿಯ ಪುರುಷರು ಮತ್ತು ವಿವಾಹಿತ ಮಹಿಳೆಯರಿಗೆ 100 ಮೀಟರ್ ಓಟ, ಪುಟಾಣಿಗಳಿಗೆ ವಿವಿಧ ಬಗೆಯ ಆಟೋಟ ಹಾಗೂ ಹಲವು ಬಗೆಯ ಮನರಂಜನಾ ಸ್ಪರ್ಧೆಗಳನ್ನ ಆಯೋಜಿಸಲಾಗಿದೆ ಎಂದರು.
ಸಮಗ್ರ ಚಾಂಪಿಯನ್ ತಂಡಕ್ಕೆ ಐನ್ ಮನೆ ಪ್ರಶಸ್ತಿ : ಕ್ರಿಕೆಟ್ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಸಮಗ್ರ ಚಾಂಪಿಯನ್ ಆಗುವ ಕುಟುಂಬಕ್ಕೆ ಜಿಲ್ಲೆಯಲ್ಲೇ ಇದೇ ಮೊದಲ ಬಾರಿಗೆ ಮರದಲ್ಲಿ ಕೆತ್ತನೆ ಮಾಡಲಾಗುವ ಆಕರ್ಷಕ ಐನ್ ಮನೆಯ ಮಾದರಿಯನ್ನ ಪ್ರಶಸ್ತಿಯಾಗಿ ನೀಡಲಾಗುತ್ತದೆ.
ಕೊಡಗಿನ ಐನ್ ಮನೆಗಳು ಐರಿ ಜನಾಂಗದ ಕೊಡುಗೆಯಾಗಿದ್ದು, ಆ ಪರಂಪರೆಯನ್ನ ಸ್ಮರಿಸುವ ನಿಟ್ಟಿನಲ್ಲಿ ಐನ್ ಮನೆ ಮಾದರಿಯನ್ನು ಪ್ರಶಸ್ತಿ ರೂಪದಲ್ಲಿ ನೀಡಲಾಗುತ್ತದೆ ಎಂದು ಆಯೋಜಕರು ತಿಳಿಸಿದರು.
ಈ ಐನ್ ಮನೆ ಮಾದರಿಯನ್ನು ಹೊಸ್ಕೇರಿ ಗ್ರಾಮದ ಕರಕುಶಲಕರ್ಮಿ ಐನಂಗಡ ಉದಯ್ ಕುಮಾರ್(ವಾಸು) ಅವರು ಕೆತ್ತನೆ ಮಾಡಲಿದ್ದಾರೆ.
ಅಲ್ಲದೆ ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಐರಿ ಜನಾಂಗದ ವಿವಿಧ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕೆಲಸವೂ ನಡೆಯಲಿದೆ. ಕ್ರಿಕೆಟ್ ಪಂದ್ಯಾಟದಲ್ಲಿ ಈ ಬಾರಿ 25 ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ವಿನ್ನರ್ ಮತ್ತು ರನ್ನರ್ ಅಪ್ ತಂಡಕ್ಕೆ ಆಕರ್ಷಕ ನಗದು ಮತ್ತು ಟ್ರೋಫಿ ನೀಡಲಾಗುತ್ತದೆ. ಬೆಸ್ಟ್ ಬ್ಯಾಟ್ಸ್ಮನ್, ಬೆಸ್ಟ್ ಬೌಲರ್, ಅತ್ಯಧಿಕ ರನ್ ಸ್ಕೋರರ್ ಸೇರಿದಂತೆ ಹಲವು ವೈಯಕ್ತಿಕ ವಿಭಾಗಗಳಲ್ಲೂ ಆಕರ್ಷಕ ನಗದು ಮತ್ತು ಟ್ರೋಫಿ ನೀಡಲಾಗುತ್ತದೆ.
ಕ್ರಿಕೆಟ್ ಪಂದ್ಯಾಟದಲ್ಲಿ ಪಾಲ್ಗೊಳ್ಳುವ ತಂಡಗಳು 1500 ರೂ. ಕ್ರೀಡಾಂಗಣ ಶುಲ್ಕ ನೀಡಿ ನೋಂದಾಯಿಸಿಕೊಳ್ಳುವಂತೆ ಆಯೋಜಕರು ಕೋರಿದ್ದಾರೆ.
ತಂಡಗಳ ನೋಂದಣಿಗೆ ಐಮಂಡ ಶಬರಿ ನಾಚಪ್ಪ-9535619684, ಆಯಪಂಡ ದೀಪು ಗಣಪತಿ – 8861287740, ಕ್ರೀಡಾಕೂಟದ ಬಗ್ಗೆ ಹೆಚ್ಚಿನ ಮಾಹಿತಿಗೆ ಮುಲೈರೀರ ಮೋಹನ್-94423 63249, ಐಮಂಡ ಗೊಪಾಲ್ ಸೋಮಯ್ಯ 8197602051 ಇವರನ್ನು ಸಂಪರ್ಕಿಸುವಂತೆ ಕೋರಲಾಗಿದೆ.