ಚೆಯ್ಯಂಡಾಣೆ ಫೆ.8 : ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ತೋಟಗಾರಿಕೆ ಇಲಾಖೆ, ಕೊಡಗು ಜಿಲ್ಲಾ ಪಂಚಾಯತ್ ಇದರ ವತಿಯಿಂದ ನರಿಯಂದಡ ಗ್ರಾಮ ಪಂಚಾಯಿತಿ ಮಟ್ಟದ ಸಂಜೀವಿನಿ ಒಕ್ಕೂಟದ ಸದಸ್ಶೆಯರಿಗೆ ಹಾಗೂ ಗ್ರಾಮಸ್ಥರಿಗೆ ಎರಡು ದಿನಗಳ ಜೇನು ಕೃಷಿ ಕಾರ್ಯಾಗಾರ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಬಿದ್ದಂಡ ರಾಜೇಶ್ ಅಚ್ಚಯ್ಯ ದೀಪ ಬೆಳಗಿಸುದರ ಮೂಲಕ ಚಾಲನೆ ನೀಡಲಾಯಿತು.
ಜೇನು ಕೃಷಿ ತರಬೇತಿ ಕಾರ್ಯಾಗಾರದಲ್ಲಿ ಒಟ್ಟು 30 ಜನರಿಗೆ ಅವಕಾಶ ಕಲ್ಪಿಸಲಾಗಿದೆ.
ಇದರಲ್ಲಿ ಸಂಜೀವಿನಿ ಒಕ್ಕೂಟದ ಸದಸ್ಯೆಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಜೇನು ಕೃಷಿಯ ಬಗ್ಗೆ ಹಿರಿಯ ತೋಟಗಾರಿಕಾ ಇಲಾಖೆಯ ಸಹಾಯಕ ಅಧಿಕಾರಿ ವಸಂತ್ ಮಾತನಾಡಿ ಇಂದಿನ ಕಾರ್ಯಾಗಾರದಲ್ಲಿ ಭಾಗವಹಿಸಿದವರಿಗೆ ಜೇನು ಕೃಷಿಯ ಬಗ್ಗೆ ತಾಂತ್ರಿಕ ಮಾಹಿತಿ ನೀಡಲಾಗುವುದು,ಹಾಗೂ ಒಂದೊಂದು ಜೇನು ಪೆಟ್ಟಿಗೆಯನ್ನು ಶೇಕಡಾ 75 ರ ಸಹಾಯ ಧನದಲ್ಲಿ ವಿತರಿಸಲಾಗುವುದು, ಸಹಾಯಧನದಲ್ಲಿ ಒಂದು ಪೆಟ್ಟಿಗೆ, ಸ್ಟಾಂಡ್ ಹಾಗೂ ಒಂದು ಜೇನು ಕುಟುಂಬದ ಬೆಲೆ 4500/- ರೂಪಾಯಿ ಇದರಲ್ಲಿ ಶೇಕಡಾ 25 ರೈತರ ವಂತಿಕೆ ಶೇಕಡಾ 75 ರಷ್ಟು ಸರಕಾರದ ಸಹಾಯಧನ ವನ್ನು ನೀಡಲಿದ್ದೇವೆ, ಅದಲ್ಲದೆ ಎರಡು ದಿನದ ತರಬೇತಿಯಲ್ಲಿ ಭಾಗವಹಿಸುವುದ್ದಕ್ಕಾಗಿ ಶಿಷ್ಯ ವೇತನ ಅಥವಾ ಪ್ರಯಾಣ ಭತ್ಯೆ ರೂಪದಲ್ಲಿ ದಿನಕ್ಕೆ 100 ರೂಪಾಯಿ ಯನ್ನು ನೀಡಲಿದ್ದಾರೆ ಜೇನು ಕೃಷಿಯ ಬಗ್ಗೆ ಯಾವುದೇ ಅನುಮಾನ, ಅಭಿಪ್ರಾಯ,ಸಮಸ್ಯೆ ಗಳು ಇದ್ದಲ್ಲಿ ಈ ಕಾರ್ಯಾಗಾರದಲ್ಲಿ ಮಾಹಿತಿಯನ್ನು ನೀಡಲಾಗುವುದೆಂದರು.
ಚೇಲಾವರದ ಪ್ರಗತಿಪರ ಜೇನು ಕೃಷಿಕ ಹಾಗೂ ಹಲವಾರು ಕೃಷಿ ಪ್ರಶಸ್ತಿಗಳಿಗೆ ಪಾತ್ರರಾದ ಪಿ.ಎ.ನಂದಕುಮಾರ್ ಮಾತನಾಡಿ ಒಂದು ಕಾಲದಲ್ಲಿ ಕೊಡಗು ಭತ್ತ,ಕಿತ್ತಾಳೆ ಹಾಗೂ ಜೇನಿನಲ್ಲಿ ಹೆಸರುವಾಸಿ ಯಾಗಿತ್ತು ಆದರೆ ಇಂದಿನ ಈ ಯುಗದಲ್ಲಿ ಕಲಬೆರಕೆಯ ಮೂಲಕ ಕೊಡಗಿನ ಜೇನಿನ ಸವಿಯನ್ನು ಕಳೆದುಕೊಂಡಿದೆ.
ಮುಂದೊಂದು ದಿನ ಕಾಫಿ,ಒಳ್ಳೆ ಮೆಣಸು ಕೃಷಿಯಲ್ಲಿ ನಷ್ಟ ಅನುಭವಿಸ ಬಹುದು ಅದಕ್ಕೆ ಪೂರಕವಾಗಿ ಉಪಕಸುಬಾಗಿ ಜೇನು ಕೃಷಿಯಲ್ಲಿ ನಾವು ತೊಡಗಬೇಕು,ಹಲವಾರು ರೋಗಗಳಿಗೆ ಜೇನು ಕೂಡ ಮದ್ದು,ಜೇನು ನೊಣ ಚುಚ್ಚಿದರೆ ನರಕ ಅದೇ ಜೇನನ್ನು ಸವಿದರೆ ಸ್ವರ್ಗವೆ ಸಿಗುತ್ತದೆ ಎಂದರು.ಜೇನು ಕೃಷಿಯಿಂದ ಉಳಿದ ಹಲವಾರು ಕೃಷಿ ಚಟುವಟಿಕೆಗಳಿಗೆ ಪ್ರಯೋಜನವಾಗಲಿದೆ ಎಂದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ ಜೇನು ಕೃಷಿಯಲ್ಲಿ ತೊಡಗಿಸಿಕೊಂಡು ಹೆಚ್ಚು ಲಾಭಗಳಿಸಿ ಎಲ್ಲರು ಇಂತಹ ಕಾರ್ಯಕ್ರಮವನ್ನು ಪ್ರೊತ್ಸಾಹಿಸಿ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಬಿದ್ದಂಡ ರಾಜೇಶ್ ಅಚ್ಚಯ್ಯ ವಹಿಸಿದರು.
ಉಪಾಧ್ಯಕ್ಷೆ ಬಿ.ಎಸ್. ಪುಷ್ಪ,ಸ.ಮಾ.ಪ್ರಾಥಮಿಕ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ರತ್ನಾ, ತೋಟಗಾರಿಕೆ ಇಲಾಖೆಯ ಅಧಿಕಾರಿ ಶಿವಕುಮಾರ್,ಗ್ರಾ.ಪಂ. ಸದಸ್ಶೆ ಮಂಜುಳಾ,ಸಂಜೀವಿನಿ ಒಕ್ಕೂಟದ ಸದಸ್ಯೆಯರು, ಗ್ರಾಮಸ್ಥರು ಇದ್ದರು.
ಪ್ರಾರ್ಥನೆಯನ್ನು ಸ್ಥಳೀಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಗಳು ಮಾಡಿದರೆ,ಸ್ವಾಗತ ಹಾಗೂ ವಂದನೆಯನ್ನು ಸಂಜೀವಿನಿ ಒಕ್ಕೂಟದ ವಸಂತಿ ನಡೆಸಿದರು. (ವರದಿ : ಅಶ್ರಫ್)