ಶ್ರೀಮಂಗಲ ಫೆ.8 : ಕೊಡಗಿನ ಎರಡು ವಿಧಾನಸಭಾ ಕ್ಷೇತ್ರದಲ್ಲಿ ದೀರ್ಘಕಾಲದಿಂದ ಅಧಿಕಾರದಲ್ಲಿರುವ ಶಾಸಕರು ಜನರ ಆಶೋತ್ತರಗಳಿಗೆ ಸ್ಪಂದಿಸಿಲ್ಲ ಎಂದು ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಟೀಕಿಸಿದ್ದಾರೆ.
ಕುಟ್ಟ ಕೊಡವ ಸಮಾಜದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು ಕೊಡಗಿನ ವಿರಾಜಪೇಟೆ ಮತ್ತು ಮಡಿಕೇರಿ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಜಯ ಗಳಿಸಲಿದ್ದಾರೆ. ಇತರ ಪಕ್ಷಗಳ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ. ನಾವು ಹೋದ ಕಡೆಯಲೆಲ್ಲ ಬದಲಾವಣೆ ಅಗತ್ಯತೆ ಬಗ್ಗೆ ಜನ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಮತ್ತೆ ಗೆಲುವು ಸಾಧಿಸಬೇಕೆಂಬ ಸಂಕಲ್ಪದೊಂದಿಗೆ ಪಕ್ಷದ ಕಾರ್ಯಕರ್ತರು ಹಾಗೂ ಮತದಾರರು ಸಂಘಟಿತರಾಗುತ್ತಿದ್ದಾರೆ ಎಂದು ಹೇಳಿದರು.
ವಿಧಾನಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲಾ ಜನಾಂಗ, ಜಾತಿ, ಧರ್ಮದವರು ಒಂದೇ ತಾಯಿಯ ಮಕ್ಕಳಂತೆ ಬದುಕಲು ಪೂರಕ ವಾತಾವರಣವನ್ನು ಸೃಷ್ಟಿಸಿದೆ. ಕೊಡಗು ಜಿಲ್ಲೆಯ ಜನ ಇಬ್ಬರು ಶಾಸಕರ ಬೇಜವಾಬ್ದಾರಿ ಆಡಳಿತದಿಂದ ರೋಸಿ ಹೋಗಿದ್ದಾರೆ. ಕಾಂಗ್ರೆಸ್ ನಿಂದ ಮಾತ್ರ ಜನಪರ ಆಡಳಿತ ನೀಡಲು ಸಾಧ್ಯ ಎಂದರು.
ಜಿಲ್ಲೆಯ ಎರಡು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿಗೆ ಪೂರಕವಾದ ವಾತಾವರಣವಿದೆ. ಜಿಲ್ಲೆಯ ಜನತೆಗೆ ಉತ್ತಮ ಆಡಳಿತ ನೀಡಲು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಕರೆ ನೀಡಿದರು.
ವಿಧಾನಪರಿಷತ್ ಮಾಜಿ ಸದಸ್ಯ ಅರುಣ್ ಮಾಚಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಪ್ರಮುಖರಾದ ಕಳ್ಳಿಚಂಡ ನಟರಾಜ್, ಅಲ್ಪಸಂಖ್ಯಾತ ವಿಭಾಗದ ಮುಖಂಡ ಎರ್ಮು ಹಾಜಿ, ಪೊನ್ನಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್ ಹಾಗೂ ಸಭೆಯ ಅಧ್ಯಕ್ಷತೆ ವಹಿಸಿದ್ದ ಕುಟ್ಟ ವಲಯ ಕಾಂಗ್ರೆಸ್ ಅಧ್ಯಕ್ಷ ಹೆಚ್. ವೈ ರಾಮಕೃಷ್ಣ ಮಾತನಾಡಿದರು.
::: ಕಾಂಗ್ರೆಸ್ಸಿಗೆ ಸೇರ್ಪಡೆ :::
ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ತೊರೆದು ಕಾರ್ಯಕರ್ತರು ಈ ಸಂದರ್ಭ ಕಾಂಗ್ರೆಸ್ ಸೇರ್ಪಡೆಗೊಂಡರು. ಕೆ. ಬಾಡಗದ ಗುಡಿಯಂಗಡ ಚಂಗಪ್ಪ ,ಬೊಳ್ಳೆರ ನರೇನ್, ಕೇಚೆಟ್ಟಿರ ಪ್ರಕಾಶ್, ಮಹಾದೇವ್, ನಾಲ್ಕೇರಿ ಗ್ರಾಮದ ಮಲ್ಲಪನೆರ ಸುಧೀರ್, ರಾಜೇಶ್, ಬೇರ,ಪಿ.ಕೆ. ಕಾಳ, ತೈಲಾ ಗ್ರಾಮದ ಅಜ್ಜಿಕುಟ್ಟಿರ ತಿಮ್ಮಯ್ಯ ಕಾಂಗ್ರೆಸ್ ಸೇರ್ಪಡೆಗೊಂಡರು.
ಈ ಸಂದರ್ಭ ಕುಟ್ಟ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಪಿ. ಸುರೇಶ್, ನಾಲ್ಕೇರಿ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ರವಿ ಪೂವಯ್ಯ ಅವರನ್ನು ಆಯ್ಕೆ ಮಾಡಿ ಅಧಿಕಾರ ಹಸ್ತಾಂತರಿಸಲಾಯಿತು. ಯುವಕ ಸಂಘಕ್ಕೆ ಕ್ರೀಡಾ ಕಿಟ್ ವಿತರಣೆ:ಸ್ಥಳೀಯ 20 ಯುವಕ ಸಂಘಕ್ಕೆ ವಾಲಿಬಾಲ್ ಕ್ರೀಡಾ ಕಿಟ್ ಅನ್ನು ಎ. ಎಸ್.ಪೊನ್ನಣ್ಣ ವಿತರಿಸಿದರು.
ಸಮಾವೇಶಕ್ಕೆ ಮೊದಲು ಕುಟ್ಟ ಬಸ್ ನಿಲ್ದಾಣದಿಂದ ಮುಖ್ಯ ಬೀದಿಯಲ್ಲಿ ಕೊಡವ ಸಮಾಜದವರಿಗೆ ಮೆರವಣಿಗೆ ನಡೆಯಿತು. ವೇದಿಕೆಯಲ್ಲಿ ಕಾಂಗ್ರೆಸ್ ಒಬಿಸಿ ಘಟಕದ ಜಿಲ್ಲಾಧ್ಯಕ್ಷ ಬಾನಂಡ ಪ್ರತ್ಯು ,ಓಬಿಸಿ ಘಟಕದ ರಾಜ್ಯ ಉಪಾಧ್ಯಕ್ಷ ಕೆ. ಎಂ .ಬಾಲಕೃಷ್ಣ,ಪೊನ್ನಂಪೇಟೆ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕೋಳೆರ ಭಾರತಿ, ಯುವ ಘಟಕದ ಅಧ್ಯಕ್ಷ ಅಂಕಿತ್ ಪೊನ್ನಪ್ಪ, ಬ್ಲಾಕ್ ಓಬಿಸಿ ವಿಭಾಗದ ಶರತ್ ಕಾಂತ್, ತಾ.ಪಂ ಮಾಜಿ ಸದಸ್ಯ ಪಲ್ವಿನ್ ಪೂಣಚ್ಚ ,ಕೆ .ಬಾಡಗ ವಲಯ ಕಾಂಗ್ರೆಸ್ ಅಧ್ಯಕ್ಷ ಚಿಮ್ಮಣಮಾಡ ರವಿನರೇಂದ್ರ, ನಾಲ್ಕೇರಿ ವಲಯ ಅಧ್ಯಕ್ಷ ತೀತಿರ ಕಟ್ಟಿ, ಡಿಸಿಸಿ ಮಾಜಿ ಅಧ್ಯಕ್ಷ ಪಿ.ಕೆ .ಪೊನ್ನಪ್ಪ ,ಎಚ್. ಡಿ ದೊಡ್ಡಯ್ಯ ಹಾಜರಿದ್ದರು. ಚೆಕ್ಕೇರ ಪಂಚಮ್ ಪ್ರಾರ್ಥಿಸಿ, ತೀತಿರ ಮಂದಣ್ಣ ನಿರೂಪಿಸಿ ಹೆಚ್.ವೈ. ರಾಮಕೃಷ್ಣ ವಂದಿಸಿದರು.