ಮಡಿಕೇರಿ ಫೆ.9 : ಮಾದಾಪುರ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಗ್ರಾಮಾಭಿವೃದ್ಧಿ ಯುವಕ ಸಂಘದ ರಜತ ಮಹೋತ್ಸವ ಹಾಗೂ ಕೆ.ಎಂ.ಕಾರ್ಯಪ್ಪ ಅವರ ಜನ್ಮದಿನಾಚರಣೆ ಅಂಗವಾಗಿ ಫೆ.11 ಮತ್ತು 12 ರಂದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಕ್ರೀಡಾ ಕೂಟ ನಡೆಯಲಿದೆ ಎಂದು ಸಂಘದ ಮಾಜಿ ಅಧ್ಯಕ್ಷ ಎಂ.ಎ.ಮಜೀದ್ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.11ರಂದು ಬೆಳಗ್ಗೆ 9 ಗಂಟೆಗೆ ಸಂಘದ ಅಧ್ಯಕ್ಷ ಕೆ.ಜೆ.ಅಂತೋಣಿ ಅವರ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದ ಮೆರವಣಿಯ ಉದ್ಘಾಟನೆಯನ್ನು ಗರಗಂದೂರು ಗ್ರಾಮದ ಎಂ.ಆರ್.ರಾಜನ್ ನೆರವೇರಿಸಲಿದ್ದು, ಕ್ರೀಡಾ ಉದ್ಘಾಟನೆಯನ್ನು ಕಾಫಿ ಬೆಳೆಗಾರ ನಂದ ಬೆಳ್ಯಿಯಪ್ಪ ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ನಿರ್ಮಲಮಾತೆ ದೇವಾಲಯದ ಧರ್ಮಗುರು ರಾಜೇಶ್, ಪ್ರಮುಖರಾದ ಗೌತಮ್ ಬಸಪ್ಪ, ಬಿ.ಎ.ಮೊಣ್ಣಪ್ಪ, ಮಾದಾಪುರ ಗ್ರಾ.ಪಂ ಅಧ್ಯಕ್ಷ ನಿರೂಪ ಹರೀಶ್ ಹಾಗೂ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಸಾಂಸ್ಕೃತಿಕ ಮತ್ತು ಸನ್ಮಾನ ಕಾರ್ಯಕ್ರಮವನ್ನು ಶಾಸಕ ಅಪ್ಪಚ್ಚು ರಂಜನ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಕೆ.ಜೆ.ಅಂತೋಣಿ ವಹಿಸಲಿದ್ದಾರೆ. ವಿಧಾನ ಪರಿಷತ್ತು ಮಾಜಿ ಸದಸ್ಯೆ ವೀಣಾ ಅಚ್ಚಯ್ಯ, ಪ್ರಮುಖರಾದ ರವಿಕುಶಾಲಪ್ಪ, ಟಿ.ಪಿ.ಸಂದೇಶ್, ಉಮೇಶ್ ಉತ್ತಪ್ಪ ಹಾಗೂ ಇತರರು ಪಾಲ್ಗೊಳ್ಳಲಿದ್ದಾರೆ.
ಫೆ.12 ರಂದು ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಸ್ವರ್ಣ ಪದಕ ವಿಜೇತ ಬಿದ್ದಂಡ ನಂಜಪ್ಪ, ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ, ಮಂಥರ್ ಗೌಡ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಕ್ರೀಡಾಕೂಟ ವಿವರ: ಅಂದು ವಿವಿಧ ವಿಭಾಗಗಳಲ್ಲಿ ಕಪ್ಪೆ ಓಟ, ವಿವಿಧ ಹಂತದ ಓಟದ ಸ್ಪರ್ಧೆ, ಲೆಮೆನ್ ಮತ್ತು ಸ್ಪೂನ್, ಮೂರುಕಾಲು ಓಟ ನಡೆಯಲಿದೆ. ಜತೆಗೆ ಪುರುಷರಿಗೆ ವಾಲಿಬಾಲ್, ಸ್ಲೋ ಬೈಕ್ ರೇಸ್, ಮಹಿಳೆಯರಿಗೆ ಥ್ರೋಬಾಲ್, ಪಾಸಿಂಗ್‍ದ ಬಾಲ್, 16 ವರ್ಷದೊಳಗಿನ ಮಕ್ಕಳಿಗೆ ಫುಟ್ಬಾಲ್ ಪಂದ್ಯಾಟ, ಸ್ಲೋ ಸೈಕಲ್ ರೇಸ್, ಸಂಜೆ 6 ಗಂಟೆಗೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಫೆ.12 ರಂದು ಸಂಜೆ 4 ಗಂಟೆಯಿಂದ ರಸಮಂಜರಿ ಕಾರ್ಯಕ್ರಮ ಹಾಗೂ ಬಹುಮಾನ ವಿತರಣೆ ನಡೆಯಲಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಕೆ.ಜೆ.ಅಂತೋಣಿ, ಉಪಾಧ್ಯಕ್ಷ ಬಿ.ಕೆ.ಸತೀಶ್ ಕುಮಾರ್, ನಿರ್ದೇಶಕ ಪಿ.ಬಿ.ಉದಯ್ ಕುಮಾರ್, ಸದಸ್ಯರುಗಳಾದ ಪಿ.ಆರ್.ಮಧು, ಕ್ಷೇವಿಯರ್ ಉಪಸ್ಥಿತರಿದ್ದರು.