ಮಡಿಕೇರಿ ಫೆ.11 : ಕೆಲಸದ ಒತ್ತಡವನ್ನು ಕಡಿಮೆ ಮಾಡಲು ಮತ್ತು ದೈಹಿಕ ಆರೋಗ್ಯ ಕಾಪಾಡಲು ಕ್ರೀಡಾಕೂಟಗಳು ಸಹಕಾರಿ ಎಂದು ಸಮಾಜ ಸೇವಕ ನಾಪಂಡ ಮುತ್ತಪ್ಪ ಹೇಳಿದರು.
ಕೊಡಗು ಪತ್ರಕರ್ತರ ಸಂಘದ ವಾರ್ಷಿಕೋತ್ಸವದ ಅಂಗವಾಗಿ ಮಡಿಕೇರಿಯ ಪೊಲೀಸ್ ಕವಾಯತು ಮೈದಾನದಲ್ಲಿ ಆಯೋಜಿಸಲಾಗಿದ್ದ ವಿವಿಧ ಇಲಾಖೆಗಳು ಮತ್ತು ಪತ್ರಕರ್ತರ ತಂಡಗಳ ನಡುವಿನ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು.
ಕೊಡಗಿನಲ್ಲಿ ಇತ್ತೀಚೆಗೆ ಆಟಗಾರರ ಹರಾಜು, ತಂಡಗಳ ಖರೀದಿ, ಅದಕ್ಕೊಂದಷ್ಟು ಪ್ರಾಯೋಜಕರು ಹೀಗೆ ಐಪಿಎಲ್ ಮಾದರಿಯ ಪಂದ್ಯಾವಳಿಯೇ ಹೆಚ್ಚಾಗಿ ನಡೆಯುತ್ತಿದೆ. ಇದರಲ್ಲಿ ಬಹುಮಾನದ ಮೊತ್ತ ಪಡೆಯುವುದಕ್ಕಾಗಿಯೇ ತಂಡಗಳು ಸೆಣೆಸುತ್ತವೆ. ಇಂತಹ ಪಂದ್ಯಾವಳಿಗಳು ವ್ಯಾಪಾರದ ಉದ್ದೇಶದಿಂದಲೇ ಕೂಡಿರುತ್ತವೆ. ಇಂತಹದರ ನಡುವೆ ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಹಾಗೂ ಶಿಕ್ಷಕರ ತಂಡಗಳನ್ನೊಳಗೊಂಡ ಸೌಹಾರ್ದ ಕ್ರಿಕೆಟ್ ಆಯೋಜಿಸಿರುವುದು ಅಪರೂಪದ ಮತ್ತು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.
ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಂಡಷ್ಟೂ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ. ಈ ನಿಟ್ಟಿನಲ್ಲಿ ಮುಂದೆ ಇನ್ನೂ ಹೆಚ್ಚಿನ ಇಲಾಖೆಗಳನ್ನು ಸೇರಿಸಿಕೊಂಡು ಪಂದ್ಯಾವಳಿ ನಡೆಸುವಂತಾಗಲಿ ಎಂದು ಹೇಳಿದರು.
ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಕ್ರೀಡಾ ಕೂಟಗಳಿಂದ ಆರೋಗ್ಯಕ್ಕೆ ಒಳ್ಳೆಯದು. ಹಾಗೆಯೇ ಸಾರ್ವಜನಿಕ ಕೆಲಸ ಮಾಡುವ ವಿವಿಧ ಇಲಾಖೆ ಸಿಬ್ಬಂದಿಯೊಂದಿಗೆ ಪತ್ರಕರ್ತರ ಕ್ರೀಡಾ ಚಟುವಟಿಕೆಯಿಂದ ನಮ್ಮ ನಡುವೆ ಭಾಂದವ್ಯ ಬೆಳೆಯುತ್ತದೆ. ಇದು ಸಮಾಜಮುಖಿ ಕೆಲಸಗಳನ್ನು ಮಾಡಲು ಸಹಕಾರಿಯಾಗುತ್ತದೆ ಎಂದರು.
ಕೊಡಗು ಪತ್ರಕರ್ತರ ಸಂಘದ ಹಿರಿಯ ಸಲಹೆಗಾರ ಬಿ.ಜಿ ಅನಂತಶಯನ ಮಾತನಾಡಿ, ಕ್ರೀಡೆಯ ಮೂಲಕ ಎಲ್ಲರೂ ಒಗ್ಗಟ್ಟಾಗಿ ಸಮಾಜದ ವ್ಯವಸ್ಥೆ ಕಾಪಾಡುವಲ್ಲಿ ಈ ಕ್ರೀಡಾ ಕೂಟ ಸಹಕಾರಿಯಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಕಾರ್ಯಕ್ರಮಗಳು ಪತ್ರಕರ್ತರ ಸಂಘದಿಂದ ನಡೆಯಲು ಇದು ಬುನಾದಿಯಾಗಿದೆ ಎಂದರು.
ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ ಮುರಳೀಧರ್ ಮಾತನಾಡಿ ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಕ್ರೀಡಾ ಸಮಿತಿ ಸಂಚಾಲಕ ಸುರೇಶ್ ಬಿಳಿಗೇರಿ ಮಾತನಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಉಜ್ವಲ್ ರಂಜಿತ್, ವಿವಿಧ ತಾಲೂಕು ಪದಾಧಿಕಾರಿಗಳು ಮತ್ತು ಸದಸ್ಯರು ಹಾಜರಿದ್ದರು.