Advertisement
1:06 PM Monday 4-December 2023

ದೇವಣಗೇರಿಯಲ್ಲಿ ರಾಷ್ಟ್ರ ಮಟ್ಟದ ಫುಟ್ಬಾಲ್ ಪಂದ್ಯಾವಳಿ : ಗ್ರೀನ್ ಕೂರ್ಗ್ ಎ.ತಂಡ ಚಾಂಪಿಯನ್

11/02/2023

ವಿರಾಜಪೇಟೆ ಫೆ.11 : ಕೋಟೆಕೊಪ್ಪ ಗ್ರಾಮದ ವಿ.ವೈ.ಸಿ. ಫುಟ್ಬಾಲ್ ಕ್ಲಬ್ ವತಿಯಿಂದ ದೇವಣಗೇರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ 3ನೇ ವರ್ಷದ ರಾಷ್ಟ್ರ ಮಟ್ಟದ ಫುಟ್ಬಾಲ್ ಪಂದ್ಯಾವಳಿಯಲ್ಲಿ ಗ್ರೀನ್ ಕೂರ್ಗ್ ಎ.ತಂಡ ಗ್ರೀನ್ ಕೂರ್ಗ್ ಬಿ. ತಂಡವನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.
3 ದಿನಗಳ ಕಾಲ ನಡೆದ ಹೊನಲು ಬೆಳಕಿನ ಪಂದ್ಯಾವಳಿಯನ್ನು ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅವರು ಉದ್ಘಾಟಿಸಿ ಮಾತನಾಡಿ ಜಾತಿ, ಧರ್ಮ ಲೆಕ್ಕಿಸದೆ ಪ್ರೀತಿ ಸಹಕಾರವನ್ನು ಬಳಸಿಕೊಂಡು ಬಲಿಷ್ಠ ದೇಶವನ್ನು ಕಟ್ಟುವ ಶಕ್ತಿ ಕ್ರೀಡೆಗಿದೆ. ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಮಾನಸಿಕವಾಗಿ, ದೈಹಿಕವಾಗಿ ಸದೃಢರಾಗಲು ಸಾಧ್ಯ. ನಮ್ಮ ಕೊಡಗಿನಲ್ಲಿ ಕ್ರೀಡೆಯಲ್ಲಿ ಸಾಧನೆ ತೋರಿದ ಹಲವಾರು ಮಂದಿ ಇದ್ದಾರೆ. ಇದೀಗ ಕೊಡಗು ಜಿಲ್ಲೆಯಾದ್ಯಂತ ಆಯಾಯ ಜನಾಂಗದವರು ವಿವಿಧ ಕ್ರೀಡೆಗಳನ್ನು ಆಯೋಜಿಸಿಕೊಂಡು ಬರುತ್ತಿರುವುದರಿಂದ ಜನಾಂಗದ ಏಳಿಗೆ ಸಾಧ್ಯವಾಗುತ್ತದೆ. ಮುಂದಿನ ಪೀಳಿಗೆಗೆ ಇದು ಮಾದರಿಯಾಗಿದೆ ಎಂದು ಹೇಳಿದರು.
ಸಮಾರೋಪ ಸಮಾರಂಭಕ್ಕೆ ಆಗಮಿಸಿದ ಕೆಪಿಸಿಸಿ ಕಾನೂನು ವಿಭಾಗದ ಅಧ್ಯಕ್ಷ ಎ.ಎಸ್ ಪೊನ್ನಣ್ಣ ಮಾತನಾಡಿ, ಕ್ರೀಡೆಯು ಮಾನವ ಜೀವನದ ಅವಿಭಾಜ್ಯ ಅಂಗವಾಗಿದೆ ಹಾಗೂ ಕ್ರೀಡೆಯು ವ್ಯಕ್ತಿಯ ಪಾತ್ರ ಮತ್ತು ವ್ಯಕ್ತಿತ್ವವನ್ನು ನಿರ್ಮಿಸಲು ಸಹಾಯ ಮಾಡುತ್ತದೆ, ದೇಹವನ್ನು ದೈಹಿಕವಾಗಿ ಸದೃಢವಾಗಿಡಲು ಅತ್ಯುತ್ತಮ ಸಾಧನವಾಗಿದೆ ಎಂದರು.
ವಿ.ವೈ.ಸಿ.ಕ್ಲಬ್ ಅಧ್ಯಕ್ಷ ವಿ.ಎನ್ ರಂಜಿತ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಕ್ರೀಡೆಯನ್ನು ಗ್ರಾಮೀಣ ಭಾಗದಲ್ಲಿ ಬೆಳೆಸಲು ಎಲ್ಲರೂ ಶ್ರಮಿಸೋಣ ಎಂದರು ಹಾಗೂ ಪಂದ್ಯಾವಳಿಯ ಯಶಸ್ವಿಗೆ ಕಾರಣರಾದವರನ್ನು ಸ್ಮರಿಸಿದರು.
ಪಂದ್ಯಾವಳಿಯಲ್ಲಿ ಉತ್ತಮ ತಂಡವಾಗಿ ಚೌಡೇಶ್ವರಿ ಯೂತ್ ಕ್ಲಬ್, ಉತ್ತಮ ಗೋಲಿ ಪ್ರಶಸ್ತಿಯನ್ನು ಪುನಿತ್ ಹಾಗೂ ಉತ್ತಮ ಆಟಗಾರ ಪ್ರಶಸ್ತಿಯನ್ನು ಗ್ರೀನ್ ಕೂರ್ಗ್ ತಂಡದ ಮಣಿ ಪಡೆದು ಕೊಂಡರು.
ಪಂದ್ಯಾವಳಿಯಲ್ಲಿ ಉಪಾಧ್ಯಕ್ಷ ವಿ.ಎನ್. ನರೇಂದ್ರ, ಗೌರವ ಉಪಾಧ್ಯಕ್ಷ ವಿ.ಎನ್. ಗೋವಿಂದ ರಾಜ್, ಖಜಾಂಚಿ ವಿ.ಎಂ. ಶಿವರಾಜ್ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.