ಮಡಿಕೇರಿ ಫೆ.12 : ಮಡಿಕೇರಿಯ ಪ್ರಾದೇಶಿಕ ಸಾರಿಗೆ ಇಲಾಖೆಯ ಕಚೇರಿಯಲ್ಲಿ ಯಾವುದೇ ಅರ್ಜಿಗಳು ಸಕಾಲದಲ್ಲಿ ವಿಲೇವಾರಿಯಾಗುತ್ತಿಲ್ಲ ಎಂದು ಆರೋಪಿಸಿರುವ ಕೊಡಗು ಜಿಲ್ಲಾ ವಾಹನ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಎಂ.ಎ.ಉಸ್ಮಾನ್, ಮುಂದಿನ 10 ದಿನಗಳೊಳಗೆ ಪರಿಸ್ಥಿತಿ ಸುಧಾರಿಸದಿದ್ದಲ್ಲಿ ಕಚೇರಿ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಅಧಿಕಾರಿಯೊಬ್ಬರು ವಿನಾಕಾರಣ ಅರ್ಜಿಗಳನ್ನು ತಿರಸ್ಕರಿಸುತ್ತಿದ್ದಾರೆ, ಇದರಿಂದ ನಗರದಿಂದ ಸುಮಾರು 9 ಕಿ.ಮೀ ದೂರದಲ್ಲಿರುವ ಆರ್‌ಟಿಒ ಕಚೇರಿಗೆ ನಿತ್ಯ ಹೋಗಿ ಬರಲು ವಾಹನ ಚಾಲಕರು ಪರದಾಡುತ್ತಿದ್ದಾರೆ. ಖಾಸಗಿ ಸಂಸ್ಥೆಯೊoದರ ವಾಹನಗಳನ್ನು ಮಾತ್ರ ನೋಂದಣಿ ಮಾಡುತ್ತಿರುವ ಅಧಿಕಾರಿ ಇತರ ವಾಹನ ಮಾಲೀಕರ ಮತ್ತು ಚಾಲಕರ ವಾಹನಗಳನ್ನು ನೋಂದಣಿ ಮಾಡದೆ ಸತಾಯಿಸುತ್ತಿದ್ದಾರೆ. ಕಚೇರಿಯಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಿದೆ ಎಂದು ಆರೋಪಿಸಿದ್ದಾರೆ.
ಅಧಿಕಾರಿ ಮುಕ್ತವಾಗಿ ಅರ್ಜಿದಾರರಿಗೆ ಸಿಗುತ್ತಿಲ್ಲ, ಚಾಲಕರ ಸಮಸ್ಯೆಯನ್ನು ಆಲಿಸುತ್ತಿಲ್ಲ. ಕಚೇರಿ ಪ್ರವೇಶಕ್ಕೆ ಅವಕಾಶ ನೀಡುತ್ತಿಲ್ಲ, ಇಲ್ಲಸಲ್ಲದ ನೆಪವೊಡ್ಡಿ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದೆ. ನಿತ್ಯ ಮಾನಸಿಕ ಕಿರುಕುಳದಿಂದಾಗಿ ಚಾಲಕರು ಬೇಸತ್ತಿದ್ದಾರೆ, ಆರ್ಥಿಕ ಸಂಕಷ್ಟದಲ್ಲಿರುವ ವಾಹನ ಮಾಲೀಕರು ತಮ್ಮ ವಾಹನವನ್ನು ಮಾರಾಟ ಮಾಡಲಾಗದೆ ಚಿಂತೆಗೀಡಾಗಿದ್ದಾರೆ ಎಂದು ದೂರಿದ್ದಾರೆ.
ಚಾಲಕರಿಗೆ ತೊಂದರೆ ನೀಡುತ್ತಿರುವ ಈ ಅಧಿಕಾರಿಯನ್ನು ತಕ್ಷಣ ವರ್ಗಾವಣೆಗೊಳಿಸದಿದ್ದಲ್ಲಿ ಜಿಲ್ಲೆಯ ಎಲ್ಲಾ ವಾಹನ ಚಾಲಕರು ತಮ್ಮ ತಮ್ಮ ವಾಹನಗಳನ್ನು ಆರ್‌ಟಿಒ ಕಚೇರಿ ಎದುರು ನಿಲ್ಲಿಸಿ ಧರಣಿ ನಡೆಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ಸರ್ಕಾರದ ಸಾರಿಗೆ ಆಯುಕ್ತರಿಗೆ ಅಧಿಕಾರಿ ವಿರುದ್ಧ ಈಗಾಗಲೇ ದೂರು ನೀಡಲಾಗಿದೆ. ಹೋರಾಟದ ಮುಂದಿನ ಭಾಗವಾಗಿ ಕಾನೂನಿನ ಮೊರೆ ಹೋಗಲಾಗುವುದು ಮತ್ತು ಅಧಿಕಾರಿಯ ಕರ್ತವ್ಯ ಲೋಪದ ಕುರಿತು ಸಂಪೂರ್ಣ ವರದಿಯೊಂದಿಗೆ ಲೋಕಾಯುಕ್ತರಿಗೆ ದೂರು ನೀಡಲಾಗುವುದು ಎಂದು ಉಸ್ಮಾನ್ ತಿಳಿಸಿದ್ದಾರೆ.








