Advertisement
1:31 AM Thursday 7-December 2023

ಹಮಾಲಿ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯ

12/02/2023

ಮಡಿಕೇರಿ ಫೆ.12 : ಶ್ರಮಜೀವಿಗಳಾದ ಹಮಾಲಿ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಷನ್ ತಲೆಹೊರೆ ಕಾರ್ಮಿಕರ ಸಂಘದ ಕೊಡಗು ಜಿಲ್ಲಾ ಸಮಿತಿ ಒತ್ತಾಯಿಸಿದೆ.
ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಸಮಿತಿಯ ಜಿಲ್ಲಾಧ್ಯಕ್ಷ ಪಿ.ಆರ್.ಭರತ್ ಹಾಗೂ ಪದಾಧಿಕಾರಿಗಳು ಹಮಾಲಿ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.
ಹಮಾಲಿ ಕಾರ್ಮಿಕರು ವ್ಯಾಪಾರ ವಹಿವಾಟು ಮತ್ತು ಜೀವನಾವಶ್ಯಕ ವಸ್ತುಗಳ ಸಾಗಾಣಿಕೆಯಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತಾರೆ. ಕನಿಷ್ಠ ಸೌಲಭ್ಯ ಮತ್ತು ಸಾಮಾಜಿಕ ಭದ್ರತೆಯಿಂದ ವಂಚಿತರಾದ ಶ್ರಮಜೀವಿಗಳ ಬೇಡಿಕೆಯನ್ನು ಸರ್ಕಾರ ಪರಿಗಣಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಸಹಕಾರ ಇಲಾಖೆ ಮೂಲಕ ಮರು ಜಾರಿಯಾಗುತ್ತಿರುವ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯ ಸೌಲಭ್ಯವನ್ನು ಉಚಿತವಾಗಿ ಎಲ್ಲಾ ಹಮಾಲಿ ಕಾರ್ಮಿಕರಿಗೆ ನೀಡಬೇಕು, ಈ ಹಿಂದೆ ಪ್ರಾರಂಭಿಸಲಾದ “ಕಾಯಕ ನಿಧಿ” ಯೋಜನೆ ಬಡ ಹಮಾಲಿ ಕಾರ್ಮಿಕರಿಗೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಸರಕಾರದಿಂದ ಮತ್ತು ಎಪಿಎಂಸಿಯಿoದ ಹಣಕಾಸು ಸಹಾಯ ಪಡೆದು ವೈದ್ಯಕೀಯ ಮರುಪಾತಿಸಿ ಯೋಜನೆ ಮುಂದುವರೆಸಬೇಕು, ೬೦ ವರ್ಷವಾದ ಹಮಾಲಿ ಕಾರ್ಮಿಕರಿಗೆ ಕನಿಷ್ಠ 1 ಲಕ್ಷ ನಿವೃತ್ತಿ ಪರಿಹಾರ ನೀಡಬೇಕು, ರಾಜ್ಯದಲ್ಲಿ ಲೈಸೆನ್ಸ್ ಹೊಂದಿದ ವಸತಿ ರಹಿತ ಹಮಾಲಿ ಕಾರ್ಮಿಕರಿಗೆ ಉಚಿತ ವಸತಿ ಯೋಜನೆ ರೂಪಿಸಬೇಕು, ನೆನಗುದಿಗೆ ಬಿದ್ದರುವ ವಸತಿ ಯೋಜನೆಯನ್ನು ಜಾರಿ ಮಾಡಲು ಕ್ರಮ ಕೈಗೊಳ್ಳಬೇಕು, ಎಲ್ಲಾ ಎಪಿಎಂಸಿಗಳಲ್ಲಿ ಕನಿಷ್ಠ ವೇತನ ಜಾರಿಯಾಗುವಂತೆ ಮುತುವರ್ಜಿ ವಹಿಸಬೇಕು, ಹಮಾಲಿ ಸಂಘಗಳ ಶಿಫಾರಸ್ಸಿನಂತೆ ಹೊಸ ಲೈಸೆನ್ಸ್ ಮತ್ತು ಲೆಸೆನ್ಸ್ ನವೀಕರಣ ಮಾಡಿಕೊಡಬೇಕು, ಮಾಲೀಕರಿಂದ ಶಿಫಾರಸ್ಸು ಪತ್ರ ತರಲು ಒತ್ತಡ ಹೇರಬಾರದು, ಮಹಿಳಾ ಹಮಾಲಿ ಕಾರ್ಮಿಕರಿಗೆ ಲೈಸೆನ್ಸ್ ನೀಡಬೇಕು, ಕನಿಷ್ಠ ವೇತನ ಸಿಗುವ ವ್ಯವಸ್ಥೆಯಾಗಬೇಕು, ಶ್ರಮಿಕರ ಭವನಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಿoದ ಕಲ್ಯಾಣ ಕಾರ್ಯಕ್ರಮ ಜಾರಿ ಮಾಡಬೇಕು, ಕಡ್ಡಾಯವಾಗಿ ಕಾರ್ಮಿಕ ಕಾನೂನುಗಳನ್ನು ಜಾರಿಯಾಗುವಂತೆ ನೋಡಿಕೊಳ್ಳಬೇಕು, ಅಸಂಘಟಿತ ಕಾರ್ಮಿಕರ ಭವಿಷ್ಯನಿಧಿ ಯೋಜನೆಯನ್ನು ಜಾರಿ ಮಾಡಬೇಕು, ರಾಜ್ಯ ಬಜೆಟ್‌ನಲ್ಲಿ ಕನಿಷ್ಠ ರೂ.೧೦೦೦ ಕೋಟಿಗಳ ಹಣಕಾಸು ನೆರವು ನೀಡಬೇಕು, ಕೇಂದ್ರ ಸರ್ಕಾರ ಜಾರಿ ಮಾಡಿರುವ ಪ್ರಧಾನಮಂತ್ರಿ ಭೀಮಾ ಮತ್ತು ಸುರಕ್ಷಾ ಯೋಜನೆಗಳನ್ನು ರಾಜ್ಯದ ಅಸಂಘಟಿತ ಕಾರ್ಮಿಕರಿಗೆ ಉಚಿತವಾಗಿ ಜಾರಿ ಮಾಡಬೇಕು, ಅಂಬೇಡ್ಕರ್ ಸಹಾಯ ಹಸ್ತ ಮತ್ತು ಇ-ಶ್ರಮ ಕಾರ್ಡ್ ಪಡೆದ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಜಾರಿ ಮಾಡಬೇಕು, ಸೇರಿದಂತೆ ಹಲವು ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಸಲ್ಲಿಸಿದರು.
ಸಮಿತಿಯ ಉಪಾಧ್ಯಕ್ಷರುಗಳಾದ ಎ.ಕೆ.ಸುಲೈಮಾನ್, ಎಂ.ಆರ್.ರಾಮು ಹಾಗೂ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಶಾಜಿ ರಮೇಶ್ ಈ ಸಂದರ್ಭ ಹಾಜರಿದ್ದರು.