ಸೋಮವಾರಪೇಟೆ,ಫೆ.13 : ಆಲೇಕಟ್ಟೆ ರಸ್ತೆಯ ಆರ್‍ಎಂಸಿ ಮಾರುಕಟ್ಟೆ ಎದುರು ನೂತನವಾಗಿ ನಿರ್ಮಾಣಗೊಂಡಿರುವ, ಶ್ರೀ ಲಕ್ಷ್ಮೀವೆಂಕಟರಮಣ ದೇವಾಲಯದ ಲೋಕಾರ್ಪಣೆ ಹಾಗೂ ವಿಗ್ರಹ ಪ್ರತಿಷ್ಠಾಪನಾ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ಜರುಗಿತು.
ಗಣಪತಿ ಹೋಮದೊಂದಿಗೆ ಆರಂಭಗೊಂಡ ದೇವಾಲಯ ಲೋಕಾರ್ಪಣೆ ಹಾಗೂ ಶ್ರೀ ದೇವರ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಪುಣ್ಯಾಹ, ದೇವನಾಂದಿ, ಅಂಕುರಾರ್ಪಣ, ಕಂಕಣ ಬಂಧನ, ಗಣಹೋಮ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಸುದರ್ಶನ ಹೋಮ, ವಾಸ್ತು ಪೂಜೆ, ದಿಗ್ಬಲಿ ಹಾಗೂ ಮಹಾಮಂಗಳಾರತಿ ಸೇರಿದಂತೆ ಇನ್ನಿತರ ಪೂಜಾ ಕೈಂಕರ್ಯಗಳು ನೆರವೇರಿತು.
ನಂತರ ಕಲಾನ್ಯಾಸ, ತತ್ವನ್ಯಾಸಾದಿ ಪೂಜೆಗಳು, ಕಲಾತತ್ತ್ವಾದಿವಾಸ ಹೋಮದ ತರುವಾಯ 12 ಗಂಟೆಗೆ ಪೂರ್ಣಾಹುತಿ, ಶ್ರೀ ದೇವರಿಗೆ ಕಳಶಾಭಿಷೇಕ, ಮಹಾಪೂಜೆ, ಮಹಾಮಂಗಳಾರತಿ ಜರುಗಿತು.
ಪ್ರತಿಷ್ಠಾಪನಾ ಮಹೋತ್ಸವದಲ್ಲಿ ದೇವಾಲಯ ಸಮಿತಿ ಅಧ್ಯಕ್ಷರಾದ ಹೆಚ್.ಪಿ.ರಾಮು, ಪ್ರಧಾನ ಕಾರ್ಯದರ್ಶಿ ಸಿ.ಕೆ.ಮೋಹನ್, ಕಾರ್ಯದರ್ಶಿ ಎಂ.ಜಿ. ಪ್ರವೀಣ್ ಕುಮಾರ್, ಖಜಾಂಚಿ ಬಿ.ಹೆಚ್. ಯೋಗೇಶ್, ಪದಾಧಿಕಾರಿಗಳಾದ ಎಂ.ಬಿ.ಉಮೇಶ್, ಬಿ.ಡಿ.ಗೋವಿಂದ ಸೇರಿದಂತೆ ಸಾವಿರಾರು ಭಕ್ತಾದಿಗಳು ಭಾಗವಹಿಸಿದ್ದರು.









