16ನೇ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಡಾ.ಎಂ.ಬಿ.ರೇಖಾ ಆಯ್ಕೆ

ಮಡಿಕೇರಿ ಫೆ.13 : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಮಾ.4 ಮತ್ತು 5 ರಂದು ಗೋಣಿಕೊಪ್ಪಲಿನಲ್ಲಿ ನಡೆಯುತ್ತಿರುವ 16ನೇ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ಹಾಗೂ ಸಾಹಿತ್ಯ ಸಂಶೋಧನಾ ಕ್ಷೇತ್ರದ ತೀತಿರ ರೇಖಾ ವಸಂತ್ ಆಯ್ಕೆಯಾಗಿದ್ದಾರೆ.
ಡಾ.ಎಂ.ಬಿ.ರೇಖಾ ಅವರು ಗೋಣಿಕೊಪ್ಪಲಿನ ಪ್ರತಿಷ್ಠಿತ ಕಾವೇರಿ ಕಾಲೇಜಿನಲ್ಲಿ 27 ವರ್ಷಗಳ ಕಾಲ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಈಗ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಕನ್ನಡ ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತಿದ್ದಾರೆ.
ಕೊಡವ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ 12 ಸಾಹಿತ್ಯ ಪುಸ್ತಕಗಳನ್ನು 30ಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿದ್ದಾರೆ. ಅವುಗಳಲ್ಲಿ ಹಲವು ಕೃತಿಗಳು ಪ್ರಶಸ್ತಿಗಳನ್ನು ಪಡೆದಿವೆ.
ನಗರದಲ್ಲಿ ನಡೆದ ಕಸಾಪ ಸಭೆಯಲ್ಲಿ ರೇಖಾ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 16 ಪದವಿ ಪೂರ್ವ ಮತ್ತು ಪದವಿ ವಿದ್ಯಾರ್ಥಿಗಳಿಗೆ ಮತ್ತು ಹದಿನಾರು ಕವಿಗಳ ಎರಡು ಕವಿಗೋಷ್ಠಿ ನಡೆಸಲು ಸಭೆ ನಿರ್ಧರಿಸಿತು. ಜಿಲ್ಲೆಯಲ್ಲಿ ಸಾಧನೆ ಮಾಡಿದ ಅರ್ಹ 16 ಸಾಧಕರನ್ನು ಗುರುತಿಸಿ ಸನ್ಮಾನಿಸಲಾಗುವುದು.
ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಎಂ.ಪಿ.ಕೇಶವ ಕಾಮತ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗೌರವ ಕಾರ್ಯದರ್ಶಿಗಳಾದ ಎಸ್.ಐ ಮನೀನಿರ್ ಅಹಮದ್, ರೇವತಿ ರಮೇಶ್, ಮಾಜಿ ಅಧ್ಯಕ್ಷ ಟಿ.ಪಿ.ಪರಮೇಶ್ವರ, ಮಡಿಕೇರಿ ತಾಲೂಕು ಅಧ್ಯಕ್ಷ ಅಂಬೇಕಲ್ ನವೀನ್, ಕುಶಾಲನಗರ ಅಧ್ಯಕ್ಷ ಕೆ.ಎಸ್.ಮೂರ್ತಿ, ಸಂಘಟನಾ ಕಾರ್ಯದರ್ಶಿ ಎಂ.ಇ.ಮೊಹಿದೀನ್, ಸಹ ಕಾರ್ಯದರ್ಶಿಗಳಾದ ಕುಮಾರ್, ಡೆನ್ನಿಸ್ ಡಿಸೋಜಾ, ನಿರ್ದೇಶಕರುಗಳಾದ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ, ಸಹನ ಕಾಂತಬೈಲು, ಎಚ್.ಎಸ್ ಪ್ರೇಮಕುಮಾರ್ ಉಪಸ್ಥಿತರಿದ್ದರು.
