ಮಡಿಕೇರಿ ಫೆ.14 : ಕೊಡಗಿನ ಬಾಣೆ ಜಾಗಕ್ಕೆ ಸಂಬಂಧಿಸಿದ ಗೊಂದಲಗಳು ಈಗಾಗಲೇ ನ್ಯಾಯಾಲಯದಲ್ಲಿ ನಿವಾರಣೆಯಾಗಿದೆ. ಆದರೆ ಕಂದಾಯ ಸಚಿವರು ಇತ್ತೀಚಿಗೆ ನೀಡಿರುವ ಹೇಳಿಕೆ ಜಿಲ್ಲೆಯ ಬೆಳೆಗಾರರಲ್ಲಿ ಗೊಂದಲ ಮತ್ತು ಆತಂಕವನ್ನು ಸೃಷ್ಟಿಸಿದೆ ಎಂದು ವ್ಯಾಲಿಡ್ಯೂ ಕೊಡವ ಕಲ್ಚರಲ್ ಅಸೋಸಿಯೇಷನ್ ಹಂಚೆಟ್ಟಿರ ಮನು ಮುದ್ದಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಜಿಲ್ಲೆಯ ಜಮ್ಮಾ ಜಾಗದ ಕುರಿತು ಸರಿಯಾಗಿ ಅರ್ಥಮಾಡಿಕೊಂಡು ಸಚಿವರು ಹೇಳಿಕೆಗಳನ್ನು ನೀಡಬೇಕು, ಈಗ ನೀಡಿರುವ ಹೇಳಿಕೆಯನ್ನು ವಾಪಾಸ್ಸು ಪಡೆದು ಜಿಲ್ಲೆಯ ಜನ ನಿಶ್ಚಿಂತೆಯಿAದ ಬದುಕುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಬೆಳೆಗಾರರ ಜಮ್ಮಾ ಜಾಗದ ಮೇಲೆ ಸರ್ಕಾರ ಹಿಡಿತ ಸಾಧಿಸುವುದು ಸರಿಯಲ್ಲ. ಜಮ್ಮಾ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ನೀಡಲಾಗುವುದು ಎಂದು ಕಂದಾಯ ಸಚಿವರು ಹೇಳಿಕೆ ನೀಡಿರುವುದು ಅರ್ಥಹೀನ. 1992 ರಲ್ಲಿ ಚಕ್ಕೇರ ಪೂವಯ್ಯ ಅವರ ಪ್ರಕರಣದ ಸಂದರ್ಭವೇ ನ್ಯಾಯಾಲಯ ಜಮ್ಮಾ ಹಿಡುವಳಿದಾರರ ಪರ ತೀರ್ಪು ನೀಡಿದೆ. ಅಲ್ಲದೆ ಕರ್ನಾಟಕ ರಾಜ್ಯವ್ಯಾಪಿ ಕಂದಾಯ ಕಾನೂನು ಒಂದೇ ಆಗಿದ್ದು, ಕೊಡಗಿಗೆ ಪ್ರತ್ಯೇಕ ಕಾನೂನಿಲ್ಲ. ವಿನಾಕಾರಣ ಮತ್ತೆ ಮತ್ತೆ ಜಮ್ಮಾ ಭೂಮಿ ವಿಚಾರದಲ್ಲಿ ಗೊಂದ ಸೃಷ್ಟಿಸಿ ಜನರಲ್ಲಿ ಆತಂಕ ಮೂಡಿಸುವುದು ಸರಿಯಲ್ಲ.
ಅಧಿಕಾರಿಗಳು ಸಚಿವರಿಗೆ ತಪ್ಪು ಮಾಹಿತಿ ನೀಡಿದ್ದರೆ ಸರಿಯಾದ ಮಾಹಿತಿಯನ್ನು ಕಾನೂನಾತ್ಮಕವಾಗಿ ಕಲೆ ಹಾಕಿ ಮುಂದಿನ ಕ್ರಮ ಕೈಗೊಳ್ಳಬೇಕು. ಅದು ಬಿಟ್ಟು ಏಕಾಏಕಿ ಗುತ್ತಿಗೆ ಆಧಾರದಲ್ಲಿ ಜಮ್ಮಾ ಜಾಗವನ್ನು ನೀಡುವುದಾಗಿ ಹೇಳಿಕೆ ನೀಡಿರುವುದು ಖಂಡನೀಯ. ತಕ್ಷಣ ಈ ಹೇಳಿಕೆಯನ್ನು ಹಿಂಪಡೆಯದಿದ್ದಲ್ಲಿ ಜಿಲ್ಲೆಯ ಎಲ್ಲಾ ಗ್ರಾಮಗಳ ಜನ ಮತ್ತು ಸಂಘ, ಸಂಸ್ಥೆಗಳು ಒಗ್ಗೂಡಿ ಹೋರಾಟ ನಡೆಸಬೇಕಾಗುತ್ತದೆ ಎಂದು ಮನು ಮುದ್ದಪ್ಪ ಎಚ್ಚರಿಕೆ ನೀಡಿದ್ದಾರೆ.










