ಜಿ.ಪಂ.ವಿವಿಧ ಅಭಿವೃದ್ಧಿ ಕಾಮಗಾರಿ : ತ್ವರಿತ ಪ್ರಗತಿಗೆ ಸಿಇಒ ಡಾ.ಆಕಾಶ್ ಸೂಚನೆ

ಮಡಿಕೇರಿ ಫೆ.14 : ವಿವಿಧ ಇಲಾಖೆಗಳಲ್ಲಿ ಬಳಕೆಯಾಗದೆ ಉಳಿದಿರುವ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ನಿಯಮಾನುಸಾರ ಬಳಕೆ ಮಾಡಿ ಮಾರ್ಚ್ ತಿಂಗಳ ಒಳಗಾಗಿ ಸಂಪೂರ್ಣ ಪ್ರಗತಿ ಸಾಧಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿ.ಪಂ.ಸಿಇಒ ಡಾ.ಎಸ್.ಆಕಾಶ್ ಅವರು ಸೂಚಿಸಿದ್ದಾರೆ.
ವಿರಾಜಪೇಟೆ ತಾಲ್ಲೂಕು ಪಂಚಾಯಿತಿ ಸಾಮಥ್ರ್ಯ ಸೌಧದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಲಜೀವನ್ ಮಿಷನ್, ಸ್ವಚ್ಚ ಭಾರತ್ ಮಿಷನ್ ಹಾಗೂ ಇತರ ಇಲಾಖೆಗಳ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಮಾರ್ಚ್ ತಿಂಗಳ ಅಂತ್ಯದೊಳಗೆ ಪೂರ್ಣಗೊಳಿಸಿ ಎಂದು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ತಿಳಿಸಿದರು.
ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚು ಒತ್ತು ನೀಡಬೇಕು. ತಾಲ್ಲೂಕಿನಲ್ಲಿ ಬಿಟ್ಟು ಹೋದಂತಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ವಿವಿಧ ಇಲಾಖೆಗಳಲ್ಲಿ ದೊರೆಯುವಂತಹ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಮಾಡಲು ಇಲಾಖಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲೆಯ 103 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸುವ್ಯವಸ್ಥಿತವಾದ ಡಿಜಿಟಲ್ ಗ್ರಂಥಾಲಯಗಳಿದ್ದು, ವಿರಾಜಪೇಟೆ ತಾಲ್ಲೂಕಿನಲ್ಲಿ 25,216 ಶಾಲಾ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಅದರಲ್ಲಿ 6,222 ಮಕ್ಕಳು ಮಾತ್ರ ಡಿಜಿಟಲ್ ಗ್ರಂಥಾಲಯದಲ್ಲಿ ನೋಂದಣಿಯನ್ನು ಮಾಡಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಹ ಡಿಜಿಟಲ್ ಗ್ರಂಥಾಲಯದಲ್ಲಿ ನೋಂದಣಿಯಾಗುವಂತೆ ಕ್ರಮವಹಿಸಿ ಗ್ರಂಥಾಲಯಗಳ ಬಳಕೆ ಹೆಚ್ಚಾದಂತೆ ವಿದ್ಯಾರ್ಥಿಗಳ ಓದಿನ ಮಟ್ಟವು ಹೆಚ್ಚಾಗಲಿದೆ ಎಂದು ತಿಳಿಸಿದರು.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಶಾಲಾ ಅಭಿವೃದ್ಧಿ ಕಾಮಗಾರಿಗಳಾದ ಆಟದ ಮೈದಾನ ಅಭಿವೃದ್ಧಿ, ಶೌಚಾಲಯ, ಶಾಲಾ ಕಾಂಪೌಂಡ್, ಉದ್ಯಾನವನ ಮತ್ತಿತರ ಕಾಮಗಾರಿಗಳನ್ನು ತೆಗೆದುಕೊಳ್ಳುವಂತೆ ನರೇಗಾ ತಾಂತ್ರಿಕ ಸಿಬ್ಬಂದಿಗಳಿಗೆ ಸಲಹೆ ನೀಡಿದರು.
ಈಗಾಗಲೇ ಗ್ರಾಮೀಣ ಭಾಗದಲ್ಲಿ ಜಲಮೂಲ ಸಂರಕ್ಷಣೆಗಾಗಿ ನರೇಗಾ ಯೋಜನೆಯಡಿ ‘ಜಲ ಸಂಜೀವಿನಿ’ ಕಾರ್ಯಕ್ರಮ ಹಮ್ಮಿಗೊಂಡಿದ್ದು, ಸಮಗ್ರ ಕೆರೆ ಅಭಿವೃದ್ಧಿ, ಅಮೃತ್ ಸರೋವರ ಕಾಮಗಾರಿಗಳು ಆಗಸ್ಟ್ ತಿಂಗಳ ಒಳಗಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಉಪ ಕಾರ್ಯದರ್ಶಿಗಳಾದ ಧನರಾಜ್, ಮುಖ್ಯ ಯೋಜನಾಧಿಕಾರಿ ರಾಜ್ ಗೋಪಾಲ್, ಮುಖ್ಯ ಲೆಕ್ಕಾಧಿಕಾರಿ ಝೀವಲ್ ಖಾನ್, ಯೋಜನಾ ನಿರ್ದೇಶಕರಾದ ಜಗದೀಶ್, ತಾ.ಪಂ.ಇಒ ಕೆ.ಸಿ.ಅಪ್ಪಣ್ಣ, ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು, ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳು, ತಾ.ಪಂ.ಸಿಬ್ಬಂದಿ ವರ್ಗದವರು, ಮನರೇಗಾ ಯೋಜನೆಯ ಎಲ್ಲಾ ತಾಂತ್ರಿಕ ಸಿಬ್ಬಂದಿ ವರ್ಗದವರು ಹಾಗೂ ಇತರರು ಉಪಸ್ಥಿತರಿದ್ದರು.
