Advertisement
4:44 AM Friday 8-December 2023

ಸೋಮವಾರಪೇಟೆ : ಕಳಪೆ ಕಾಮಗಾರಿ ಆರೋಪ : ಅಧಿಕಾರಿಗಳಿಂದ ಪರಿಶೀಲನೆ

14/02/2023

ಸೋಮವಾರಪೇಟೆ ಫೆ.14 :  ಪ.ಪಂ  ವ್ಯಾಪ್ತಿಯಲ್ಲಿ ನಡೆಯುತ್ತಿರುವ ನಗರೋತ್ಥಾನ ಕಾಮಗಾರಿ ಕಳಪೆಯಾಗಿರುವ ದೂರಿನ ಹಿನ್ನಲೆಯಲ್ಲಿ ಇಲಾಖೆಯ ಅಧಿಕಾರಿಗಳು ದೌಡಾಯಿಸಿ ಬಂದರೆ, ಗುತ್ತಿಗೆದಾರ ಸ್ಥಳಕ್ಕೆ ಬಾರದೆ ಗೈರಾಗಿ ಅಧಿಕಾರಿಗಳನ್ನು ಪೇಚಿಗೆ ಸಿಲುಕಿಸಿದ್ದಾರೆ.
ಪಟ್ಟಣದ ವಿವಿಧೆಡೆ 2.26ಕೋಟಿ ವೆಚ್ಚದ ಚರಂಡಿ ಹಾಗೂ ರಸ್ತೆ ಕಾಮಗಾರಿ ಗುತ್ತಿಗೆದಾರನ ನಿರ್ಲಕ್ಷ್ಯ ಹಾಗೂ ಅಸಡ್ಡೆಯಿಂದ ಆರಂಭದಲ್ಲೇ ವಿವಾದಕ್ಕೆ ಕಾರಣವಾಗಿದೆ.
ಇಲ್ಲಿನ ವಲ್ಲಭಭಾಯಿ ರಸ್ತೆ ಹಾಗೂ ರೇಂಜರ್ ಬ್ಲಾಕಿನಲ್ಲಿ ನಿರ್ಮಾಣಗೊಂಡಿರುವ ಚರಂಡಿ ಕಳಪೆ ಕಾಮಗಾರಿ ಯಾಗಿರುವ ಬಗ್ಗೆ ಪ.ಪಂ  ಸದಸ್ಯರ ಆರೋಪದ ಹಿನ್ನಲೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಅಭಿಯಂತರ ಶಿವಪ್ರಕಾಶ್ ಇಂದು ಪಟ್ಟಣಕ್ಕೆ ದೌಡಾಯಿಸಿ ಪಟ್ಟಣ ಪಂಚಾಯ್ತಿ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳೊಡನೆ ಸಮಾಲೋಚನೆ ನಡೆಸಿದರು.

ಈ ಸಂದರ್ಭ ಗುತ್ತಿಗೆದಾರರು ಗೈರಾಗಿರುವ ಬಗ್ಗೆ ಸದಸ್ಯರುಗಳು ಆಕ್ಷೇಪಿಸಿದ್ದರಿಂದ ಅಧಿಕಾರಿಗಳು ಪೇಚಿಗೆ ಸಿಲುಕುವಂತಾಯಿತು. ಕಾಮಗಾರಿ ಆರಂಭಿಸುವಾಗ ಪಂಚಾಯ್ತಿ ಆಡಳಿತಕ್ಕೆ ಮತ್ತು ವಾರ್ಡ್ ಸದಸ್ಯರಿಗೆ ಮಾಹಿತಿಯೇ ನೀಡಿಲ್ಲ. ಅಲ್ಲದೆ ಕೆಲವೇ ಕಾರ್ಮಿಕರನ್ನು ಇಟ್ಟುಕೊಂಡು ಬೇಕಾಬಿಟ್ಟಿ ಹಾಗೂ ಅವೈಜ್ಞಾನಿಕವಾಗಿ ಕಾಮಗಾರಿ ನಡೆಸುತ್ತಿದ್ದಾರೆ ಎಂದು ಸದಸ್ಯರು ಆರೋಪಿಸಿದರು.
ಕಾಮಗಾರಿ ನಡೆಯುತ್ತಿರುವ ವಲ್ಲಭ ಭಾಯಿ ರಸ್ತೆಗೆ ಭೇಟಿ ನೀಡಿದ ಅಧಿಕಾರಿಗಳು ಪರಿಶೀಲನೆ ನಡೆಸಿದರು.
ರಸ್ತೆಗಿಂತ ಮೇಲೆ ಚರಂಡಿ ನಿರ್ಮಾಣ ಸೇರಿದಂತೆ ಕಾಮಗಾರಿ ಕಳಪೆಯಾಗಿರುವ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ ಅವರು ನಗರಾಭಿವೃದ್ಧಿ ಯೋಜನೆಯ ಸೈಟ್ ಇಂಜಿನಿಯರ್ ಸಂಭ್ರಮ ಹಾಗೂ ಟೀಮ್ ಲೀಡರ್ ರತಿಷ್
ಅವರಿಗೆ ಕೆಲಸ ನಡೆಯುವ ಸಂದರ್ಭ ಸ್ಥಳದಲ್ಲಿದ್ದು, ಸರಿಯಾದ ರೀತಿಯಲ್ಲಿ ಗಮನ ಹರಿಸುವಂತೆ ಸೂಚಿಸಿದರು. ಪ.ಪಂ  ಇಂಜಿನಿಯರ್ ವೆಂಕಟೇಶ್ ನಾಯಕ್  ಆಗಾಗ ಬಂದು ಪರಿಶೀಲನೆ ನಡೆಸುವಂತೆ ತಿಳಿಸಿದರು.
ಈ ಸಂದರ್ಭ ಗುತ್ತಿಗೆದಾರರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಅಭಿಯಂತರರು ನೋಟಿಸ್ ನೀಡುವ ಎಚ್ಚರಿಕೆ ನೀಡಿ  ಕಾಮಗಾರಿ ನಡೆಯುವ ಸ್ಥಳಕ್ಕೆ ಬರುವಂತೆ ತಾಕೀತು ಮಾಡಿದರು.
ಈ ಸಂದರ್ಭ ಪ.ಪಂ ಅಧ್ಯಕ್ಷ ಚಂದ್ರು, ಸದಸ್ಯರುಗಳಾದ ಜಯಂತಿ ಶಿವಕುಮಾರ್, ಜೀವನ್, ಜಯಣ್ಣ, ಶೀಲಾ ಡಿಸೋಜ , ಮಹೇಶ್, ಶುಭಕರ, ಮೋಹಿನಿ, ಸೋಮೇಶ್, ಶರತ್,  ಮುಖ್ಯಾಧಿಕಾರಿ ನಾಚಪ್ಪ ಹಾಗೂ ಮತ್ತಿತರರು ಹಾಜರಿದ್ದರು.