ಮಡಿಕೇರಿ ಫೆ.16 : ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಕಿರುಗೂರು ಗ್ರಾಮದ ಚೆಪ್ಪುಡಿರ ಸುಜು ಕರುಕಬಯ್ಯನವರ ಗದ್ದೆಯಲ್ಲಿ ಯುಕೊ ಸಂಘಟನೆಯ ನಾಲ್ಕನೇ ವರ್ಷದ ಬೇದ ಚಂಗ್ರಾಂದಿಯ ಆಚರಣೆ ನಡೆಯಿತು.
ಸಾಂಪ್ರದಾಯಿಕ ಉಡುಗೆ ತೊಟ್ಟ ಮಹಿಳೆಯರು ಗದ್ದೆಯಲ್ಲಿ ವಿಧಿವಿಧಾನಗಳನ್ನು ನೆರವೇರಿಸಿ, ಸಾಂಪ್ರದಾಯಿಕವಾಗಿ ಕೈಎಣ್ಣೆಯನ್ನು ಭೂಮಿಗೆ ಸುರಿದು, ಮರದ ಬಾಚಣಿಕೆಯನ್ನಿಟ್ಟು, ” ಭೂಮಿತಾಯಿ ನೀಡ ಉಟ್ಟಿಮಂಡೆ ಕಾಂಜದ್ ತಂಪಾಡ್ – ಕುಂಬ್ಯಾತ್ ಮಳೆ ಆಯಿತ್ ಕಂದ್ ಲೂ ಕೂಳಾಡ್ ” ಎಂದು ಹೇಳುವುದರ ಮೂಲಕ ಭೂಮಿತಾಯಿಯನ್ನು ಸ್ಮರಿಸಿದರು.
ನಂತರ ಸುಜು ಕರುಂಬಯ್ಯ ನವರ ಮನೆಯಲ್ಲಿ ಜರುಗಿದ ಸಭೆಯನ್ನುದ್ದೇಶಿಸಿ ಮಾತನಾಡಿದ ಯುಕೊ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ಒಂದು ಮಗುವಿನ ಸಮಗ್ರ ಬೆಳವಣಿಗೆಯ ಹಿಂದೆ ಒಬ್ಬ ತಾಯಿಯ ಪ್ರಭಾವ ಮಹತ್ವದ ಪಾತ್ರ ನಿರ್ವಹಿಸುವ ಹಾಗೆ ಒಂದು ಸಮುದಾಯದ ಸಮಗ್ರ ಬೆಳವಣಿಗೆಯಲ್ಲಿ ಭೂಮಿ ತಾಯಿಯ ಪ್ರಭಾವವೂ ಬಹುಮುಖ್ಯ ಪಾತ್ರವನ್ನು ನಿರ್ವಹಿಸುತ್ತದೆ. ಇದರ ಬಾಂಧವ್ಯದ ಸಂಕೇತವಾಗಿ ಕೊಡವರು ಬೇದ ಚಂಗ್ರಾಂದಿಯನ್ನು ಆಚರಣೆ ಮಾಡುತ್ತಾರೆ ಎಂದು ಹೇಳಿದರು.
ಅನಾದಿಕಾಲದಿಂದಲೂ ಕೊಡವರು ತಮ್ಮದೇ ಆದ ಸ್ವಂತ ಶಕ್ತಿಯಿಂದ, ಹಿರಿಯರು ಹಾಕಿಕೊಟ್ಟ ಸಂಸ್ಕೃತಿ ಹಾಗೂ ಸಂಸ್ಕಾರಗಳನ್ನು ಪಾಲಿಸುತ್ತ ನಂಬಿಕೆಗಳನ್ನು ಉಳಿಸಿಕೊಳ್ಳುವುದರ ಮೂಲಕ ತಮ್ಮ ಏಳಿಗೆಯನ್ನು ಕಂಡುಕೊಂಡ ಅಪರೂಪದ ಜನಾಂಗವಾಗಿದೆ. ಇತಿಹಾಸದಿಂದಲೇ ಯಾವುದೇ ರಾಜರಿಂದಾಗಲಿ, ರಾಜಕೀಯದಿಂದಾಗಲಿ ಕೊಡವರಿಗೆ ಅನುಕೂಲಗಳಾದ ಉದಾಹರಣೆಗಳೇ ಇಲ್ಲ. ಈಗಲೂ ಸಹ ಯಾವುದೇ ರಾಜಕೀಯ ಪಕ್ಷ ಅಥವಾ ಮುಖಂಡರುಗಳಿಂದ ಕೊಡವರಿಗೆ ಒಳಿತಾಗುತ್ತದೆ ಎಂಬುವುದು ಕೇವಲ ಭ್ರಮೆ. ಆದ್ದರಿಂದ ನಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವತ್ತ ನಾವೇ ಗಮನ ಹರಿಸುವುದರ ಮೂಲಕ ನಮ್ಮನ್ನು ನಾವು ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಕಾಪಾಡಿಕೊಳ್ಳಲು ಕರೆ ನೀಡಿದರು.
ಪ್ರಪಂಚದಾದ್ಯಂತ ಹರಡಿರುವ ಕೊಡವರು ಕನಿಷ್ಠ ಹಬ್ಬ ಹರಿದಿನಗಳು, ಕಾರೋಣಂಗ್ ಕೊಡ್ಪ ಕಾರ್ಯಕ್ರಮಗಳಿಗಾದರೂ ತಮ್ಮ ನೆಲೆಗೆ ಮರಳುವಂತಾಗಬೇಕು. ಆ ಮೂಲಕ ತಾವು ಹುಟ್ಟಿದ ಮಣ್ಣಿನ ಬಾಂಧವ್ಯ ಉಳಿಸಿಕೊಳ್ಳಬೇಕು. ಹಾಗಾದಾಗ ಮಾತ್ರ ನಾವು ಭೌತಿಕ, ಭಾವನಾತ್ಮಕ ಹಾಗೂ ಆಧ್ಯಾತ್ಮಿಕ ಏಳಿಗೆಯನ್ನು ಕಂಡುಕೊಳ್ಳಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಕೊಡವರನ್ನು ಹೊರತು ಪಡಿಸಿದಂತೆ ಎಲ್ಲಾ ಸಮುದಾಯಗಳ ಜನಾಂಗೀಯ ಹಾಗೂ ಧಾರ್ಮಿಕ ನಿರ್ಧಾರ ಗಳು ಆಯಾ ಜನಾಂಗೀಯ ಹಾಗೂ ಧಾರ್ಮಿಕ ಮುಖಂಡರಿಂದಲೇ ಆಗುತ್ತಿದೆ. ದುರದೃಷ್ಟವಶಾತ್ ಕೊಡವ ಸಮುದಾಯದ ಜನಾಂಗೀಯ ಹಾಗೂ ಧಾರ್ಮಿಕ ನಿರ್ಧಾರಗಳಲ್ಲಿ ರಾಜಕಾರಣಿಗಳ ಹಸ್ತಕ್ಷೇಪ ಅಧಿಕವಾಗಿದ್ದು, ಇದುವೇ ಸಮುದಾಯಕ್ಕೆ ಮಾರಕವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಮೊದಲಿಗೆ ತಪ್ಪಡಕ ಕಟ್ಟಿ ಪ್ರಾರ್ಥಿಸಲಾಯಿತು. ಚೆಪ್ಪುಡಿರ ಸುಜು ಕರುಂಬಯ್ಯ ಸ್ವಾಗತಿಸಿದರು.
ಸಭೆಯಲ್ಲಿ ಚೆಪ್ಪುಡಿರ ಪ್ರತಿಮ ಕರುಂಬಯ್ಯ, ಪನ್ನಗಾ ಕರುಂಬಯ್ಯ, ಕಿರಣ್ ಸುಬ್ಬಯ್ಯ, ರೆಣು ಸುಬ್ಬಯ್ಯ, ಆಪಟ್ಟಿರ ಜಾನಕಿ ಚಂಗಪ್ಪ, ಚಕ್ಕೇರ ರಂಜಿತ್, ಸುಮ ರಂಜಿತ್, ಕೃಷಿಕಾ ರಂಜಿತ್, ಕಳ್ಳಿಚಂಡ ರಾಬಿನ್ ಸುಬ್ಬಯ್ಯ, ಸುಮಿ ರಾಬಿನ್, ದೀನ ಉತ್ತಪ್ಪ, ತನ್ವಿ ಉತ್ತಪ್ಪ, ನೆಲ್ಲಮಕ್ಕಡ ಮಾದಯ್ಯ, ಮಚ್ಚಾಮಾಡ ಅರುಣ್ ಸೋಮಯ್ಯ, ಪ್ರೀಯಾ ಅರುಣ್, ಅಜಿನಿಕಂಡ ಸೂರಜ್ ತಿಮ್ಮಯ್ಯ, ಬೊಳಿಯಂಗಡ ಬೋಪಣ್ಣ, ವೇದಾಂತ್ ಸೋಮಯ್ಯ, ಬೊಳ್ಳಚೆಟ್ಟಿರ ಮೈನಾ ಕಾಳಪ್ಪ, ಕುಂಜಿಲಂಡ ಗ್ರೇಸಿ ಪೂಣಚ್ಚ, ದಿಲನ್ ದೇವಯ್ಯ ಪೂಣಚ್ಚ, ಮುಕ್ಕಾಟಿರ ದಿವಿನ್ ತಿಮ್ಮಯ್ಯ, ನಾಯಕಂಡ ರವಿ ಉತ್ತಪ್ಪ, ಪುಷ್ಪ ಉತ್ತಪ್ಪ, ಪಾಲಚಂಡ ಸದಾ ಪೂವಯ್ಯ, ಕಲಾ ಪೂವಯ್ಯ,ಕಾಂಡೇರ ಲಕ್ಷ್ಮಿ ಹಾಜರಿದ್ದರು.








