ಪದ್ಮಶ್ರೀ ಐಮುಡಿಯಂಡ ರಾಣಿ ಮಾಚಯ್ಯ ಅವರ ಕುರಿತು

ಮಡಿಕೇರಿ ಫೆ.16 : (ಬರಹ : ಬೊಳ್ಳಜಿರ ಬಿ.ಅಯ್ಯಪ್ಪ) ಕೊಡವ ಜಾನಪದ ಕಲೆಯ ಪ್ರಸರಣಕ್ಕೆ ಅರ್ಧ ಶತಮಾನದ ತಮ್ಮ ಬದುಕನ್ನು ಮೀಸಲಿಟ್ಟ ಕೊಡಗಿನ ಜಾನಪದ ಕಲಾವಿದೆ ಐಮುಡಿಯಂಡ ರಾಣಿ ಮಾಚಯ್ಯ ಅವರು ಕೇಂದ್ರದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಪದ್ಮಶ್ರೀ’ಗೆ ಭಾಜನರಾಗಿದ್ದಾರೆ.
ರಾಣಿ ಮಾಚಯ್ಯ ಅವರು ಜಾನಪದ ಕಲಾವಿದೆಯಾಗಿ 10 ಸಾವಿರಕ್ಕೂ ಹೆಚ್ಚಿನ ಮಕ್ಕಳಿಗೆ ಕೊಡಗಿನ ವಿಶಿಷ್ಟ ಜಾನಪದ ಕಲಾ ಪ್ರಕಾರ ‘ಉಮ್ಮತ್ತಾಟ್’ ನ್ನು ಕಲಿಸಿಕೊಟ್ಟಿದ್ದಾರೆ. ಜಾನಪದ ಮತ್ತು ಸಾಂಸ್ಕøತಿಕ ಕ್ಷೇತ್ರಕ್ಕೆ ನೀಡಿದ ಅಪಾರ ಕೊಡುಗೆಯ ಹಿನ್ನೆಲೆ ಪ್ರತಿಷ್ಠಿತ ‘ಪದ್ಮಶ್ರೀ’ ಪುರಸ್ಕಾರ ಇವರನ್ನು ಕೈಬೀಸಿ ಕರೆದಿದೆ.
ರಾಣಿ ಮಾಚಯ್ಯ ಅವರು ವಕೀಲ ದಿ.ಐಮುಡಿಯಂಡ ಮಾಚಯ್ಯ ಅವರ ಪತ್ನಿ. 4-4-1943 ರಲ್ಲಿ ಜನಿಸಿದ ಇವರು ಕಲಾವಿದೆಯಾಗಿ ಕೊಡವ ಜಾನಪದ ಕ್ಷೇತ್ರದಲ್ಲಿ ಕಳೆದ 50 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.
ಅಪ್ರತಿಮ ದೇಶಭಕ್ತರು, ಯೋಧರು ಜನಿಸಿದ ಕೊಡಗಿನಲ್ಲಿ ಸಂಸ್ಕೃತಿ ಪೆÇೀಷಕರಿಗೇನೂ ಕೊರತೆಯಿಲ್ಲ, ಆದರೆ ಆ ಸಂಸ್ಕೃತಿಯನ್ನು ಹೊರ ಜಗತ್ತಿಗೆ ಸಮರ್ಥವಾಗಿ ಪರಿಚಯಿಸಿದವರಲ್ಲಿ ಮೊದಲಿಗರು ರಾಣಿ ಮಾಚಯ್ಯನವರೆಂದರೆ ಅತಿಶಯೋಕ್ತಿಯಲ್ಲ. “ಉಮ್ಮತ್ತಾಟ್” ಎಂಬ ಮಹಿಳೆಯರ ನೃತ್ಯ ಪ್ರಕಾರವನ್ನು ದೇಶದೆಲ್ಲೆಡೆ ಜನಪ್ರಿಯಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.
ರಾಣಿ ಮಾಚಯ್ಯ 1943 ಏಪ್ರಿಲ್ 4 ರಂದು ವಿರಾಜಪೇಟೆ ತಾಲ್ಲೂಕಿನ ಸಿದ್ದಾಪರದಲ್ಲಿ ಜನಿಸಿದರು. ಇವರ ತಂದೆ ಮೇದಪ್ಪ, ತಾಯಿ ತಾಯಮ್ಮ. ಇವರು ಮಧ್ಯಮ ವರ್ಗದವರು, ಕಂಡ್ರತಂಡ ಕುಟುಂಬದ ಮೇದಪ್ಪನವರು ಸಿದ್ದಾಪುರದಲ್ಲಿ ಉದ್ಯಮಿಯಾಗಿದ್ದರು, ತಾಯಿ ತಾಯಮ್ಮ ಶಿಕ್ಷಕಿಯಾಗಿದ್ದರು. ಮಗಳು ಚಿಕ್ಕವಳಿರುವಾಗಲೇ ಮೇದಪ್ಪ ವಿರಾಜಪೇಟೆ ಸಮೀಪ ಕಾಕೋಟು ಪರಂಬುವಿನಲ್ಲಿ ತೋಟ ಖರೀದಿಸಿದ್ದರು. ಹಾಗಾಗಿ ಇವರ ವಾಸ ಸಿದ್ದಾಪುರದಿಂದ ಕಾಕೋಟುಪರಂಬುವಿಗೆ ಸ್ಥಳಾಂತರವಾಯಿತು.
ರಾಣಿ ಮಾಚಯ್ಯ ಅವರ ಪ್ರಾಥಮಿಕ ವಿದ್ಯಾಭ್ಯಾಸವನ್ನು ಕಾಕೋಟು ಪರಂಬುವಿನಲ್ಲಿ, ಪ್ರೌಢಶಾಲೆ ಹಾಗೂ ಕಾಲೇಜು ಶಿಕ್ಷಣವನ್ನು ಮಡಿಕೇರಿ ಸರ್ಕಾರಿ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. ಪದವಿ ಮುಗಿದ ಬಳಿಕ ರಾಣಿಯವರು 17.05.1967 ರಲ್ಲಿ ಮಡಿಕೇರಿಯ ವಕೀಲ ಐಮುಡಿಯಂಡ ಮಾಚಯ್ಯ ಅವರನ್ನು ವಿವಾಹವಾದರು.
:: ಸಾಂಸ್ಕೃತಿಕ ಚಟುವಟಿಕೆಗಳು ::
ಶಾಲಾ ಕಾಲೇಜು ಅವಧಿಯಲ್ಲಿ ಓದಿನಲ್ಲಿ ಚುರುಕಾಗಿದ್ದ ರಾಣಿ ಪಠ್ಯೇತರ ಚಟುವಟಿಕೆಗಳಲ್ಲೂ ತುಂಬಾ ಆಸಕ್ತಿ ಹೊಂದಿದ್ದರು. ಶಾಲೆಯ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ತಪ್ಪದೇ ಭಾಗವಹಿಸಿ ಶಿಕ್ಷಕರ ಮತ್ತು ಘೋಷಕರ ಮೆಚ್ಚುಗೆಗೆ ಪಾತ್ರರಾಗಿದ್ದರು. ಇವರುಗಳ ಪ್ರೋತ್ಸಾದಿಂದ ಮುಂದೆ ಉಮ್ಮತ್ತಾಟ್, ಕೋಲಾಟ ಹಾಗೂ ಇನ್ನಿತರ ನೃತ್ಯಗಳಲ್ಲಿ ಹೆಚ್ಚಿನ ಆಸಕ್ತಿ ಬೆಳಸಿಕೊಳ್ಳಲು ನಾಂದಿಯಾಯಿತು. ಹಾಗಾಗಿ ಕಾಲೇಜಿನ ಎಲ್ಲಾ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಇವರದ್ದೇ ಅಗ್ರಸ್ಥಾನವೆಂದು ಇವರ ಸಹಪಾಠಿಗಳು ಇಂದೂ ನೆನಪಿಸಿಕೊಳ್ಳುತ್ತಾರೆ.
:: ಉಮ್ಮತ್ತಾಟ್ ನೃತ್ಯಕ್ಕೆ ಚಾಲನೆ ಮತ್ತು ತರಬೇತಿ ::
ರಾಣಿ ಮಾಚಯ್ಯ ಅವರ ಕಲಾ ಪ್ರತಿಭೆಗೆ ಪ್ರೋತ್ಸಾಹದ ನೀರೆರೆದು ಪೋಷಿಸಿದವರು ಪತಿ ಐಮುಡಿಯಂಡ ಮಾಚಯ್ಯನವರು. `ಕಲೆ-ಸಂಸ್ಕೃತಿ ಬಗ್ಗೆ ಅಪಾರವಾದ ಕಳಕಳಿ ಇದ್ದ ಅವರು ಪತ್ನಿಯನ್ನು ಸಾಂಸ್ಕೃತಿಕ ಕ್ಷೇತ್ರದಲ್ಲಿ ಮುಂದುವರೆಯಲು ಸಹಕರಿಸಿದರು. ಮುಂದೆ ರಾಣಿ ಮಾಚಯ್ಯ ಅವರು ಯುವತಿಯರ ತಂಡವೊಂದನ್ನು ಕಟ್ಟಿಕೊಂಡು “ಉಮ್ಮತ್ತಾಟ್” ನೃತ್ಯದ ತರಬೇತಿ ನೀಡಿದರು. ಕಾವೇರಿಮಾತೆಯ ಸ್ತುತಿಯೊಂದಿಗೆ ಪ್ರಾರಂಭವಾಗುವ ನಿಧಾನಗತಿಯ ಗೀತ ಗಾಯನಕ್ಕೆ ಲವಲವಿಕೆಯ ಹೊಸರೂಪ ಕೊಟ್ಟು ಅದನ್ನು ಹೆಚ್ಚು ಜನಪ್ರಿಯಗೊಳಿಸಲು ಶ್ರಮಿಸಿದರು.
:: ಕೊಡಗಿನ ಜಾನಪದ ಲೋಕದಲ್ಲಿ ಮೂಡಿಸಿದ ಹೆಜ್ಜೆ ::
ಸುಮಾರು ನಾಲ್ಕೈದು ದಶಕಗಳ ಹಿಂದೆ ಕೊಡಗಿನಲ್ಲಿ ಪೋಷಕರು ತಮ್ಮ ಹೆಣ್ಣು ಮಕ್ಕಳನ್ನು ಹೊರ ಪ್ರದೇಶಗಳಲ್ಲಿ ಅದರಲ್ಲೂ ಸಾರ್ವಜನಿಕವಾಗಿ ಹಾಗೂ ವೇದಿಕೆಗಳಲ್ಲಿ ನೃತ್ಯ ಮಾಡಿಸಲು ಹಿಂಜರಿಯುತ್ತಿದ್ದ ಕಾಲ. ಅಂತಹ ಮೂಗು ಮುರಿಯುತ್ತಿದ್ದ ಕಾಲದಲ್ಲೇ ಎಲ್ಲಾ ಮುಜಗರಗಳನ್ನು ಹೋಗಲಾಡಿಸಿ ಅದಕ್ಕೊಂದು ಗೌರವಯುತ ಸ್ಥಾನಮಾನವನ್ನು ಕಲ್ಪಿಸಿ ಕೊಟ್ಟವರು ರಾಣಿಮಾಚಯ್ಯ ಅವರು. ಹೀಗಾಗಿ ಕೊಡಗಿನ ತಲಕಾವೇರಿಯಿಂದ ಕಾಶ್ಮೀರದವರೆಗೂ ಬೆಡಗಿನ “ಉಮ್ಮತ್ತಾಟ್” ನೃತ್ಯವನ್ನು ರಾಣಿಮಾಚಯ್ಯ ಜನಪ್ರಿಯಗೊಳಿಸಿದರಲ್ಲಿ ಮೊದಲಿಗರಾದರು. ಕೊಡಗಿನ ಸಾಂಸ್ಕೃತಿಕ ಲೋಕದಲ್ಲಿ “ಉಮ್ಮತ್ತಾಟ್ “ಮೂಡಿಸಿದ ಹೆಜ್ಜೆ ಅಭೂತಪೂರ್ವ, ಇದರ ಹಿಂದಿನ ರಾಣಿಮಾಚಯ್ಯ ಅವರ ಶ್ರಮವನ್ನು ಯಾರೂ ಅಲ್ಲಗಳೆಯಲಾರರು.
:: ಆಸಕ್ತ ಯುವತಿಯರಿಗೆ ತರಬೇತಿ ::
ರಾಣಿಮಾಚಯ್ಯ ಅವರ ನಾಯಕತ್ವದ ತಂಡ ಎಂದ ಕೂಡಲೇ ಕೊಡಗಿನ ಮಹಿಳೆಯರು ನೃತ್ಯದಲ್ಲಿ ಪಾಲ್ಗೊಳ್ಳಲು ಹಿಂಜರಿಯಲಿಲ್ಲ. ಪೋಷಕರು ತಮ್ಮ ಮಕ್ಕಳನ್ನು ನಿರ್ಭೀತಿಯಿಂದ ಕಳುಹಿಸಿಕೊಡುತ್ತಿದ್ದರು. ನಿರಂತರ ತರಬೇತಿ ನೀಡುತ್ತಾ ನೃತ್ಯದಲ್ಲಿ ಪ್ರಾದೇಶಿಕತೆಯ ಕಂಪನ್ನು ಉಳಿಸಿಕೊಂಡು ಹೊಸ ಹೊಸ ಅವಿಷ್ಕಾರಗಳನ್ನು ಮಾಡುವಲ್ಲಿ ರಾಣಿ ಮಾಚಯ್ಯ ಯಶಸ್ವಿಯಾದರು.
:: ಕಾವೇರಿ ಕಲಾ ವೃಂದ ::
ಕಲೆಯ ಮೂಲಕವೇ ಅಪಾರ ಜನಪ್ರಿಯತೆ ಹೊಂದಿದ್ದ ರಾಣಿಮಾಚಯ್ಯ ಅವರು 1997ರಲ್ಲಿ ತಮ್ಮದೇ ಆದ “ಕಾವೇರಿ ಕಲಾ ವೃಂದ” ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ, ಅದರ ಮೂಲಕ ಮತ್ತಷ್ಟು ಸದೃಢವಾಗಿ ನೃತ್ಯತಂಡ ಕಟ್ಟಿ ಬೆಳೆಸತೊಡಗಿದರು. ಕೊಡವ ಭಾಷೆಯಲ್ಲಲ್ಲದೆ ಕನ್ನಡ ನೃತ್ಯಗಳನ್ನು ಕೂಡ ನೀಡಿ ಅಪಾರ ಮನ್ನಣೆಗಳಿಸಿದರು.
:: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ::
ರಾಣಿಮಾಚಯ್ಯನವರ ಮೂರ್ನಾಲ್ಕು ದಶಕಗಳ ಸಾಂಸ್ಕೃತಿಕ ಕ್ಷೇತ್ರದ ಕಲಾ ಸೇವೆಯನ್ನು ಪರಿಗಣಿಸಿದ ಸರಕಾರ 2010 ರಲ್ಲಿ ಇವರನ್ನು ಮೂರು ವರ್ಷಗಳ ಅವಧಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರನ್ನಾಗಿ ನೇಮಿಸಿತು. ಮೊದಲು ಸ್ಥಾಪಕ ಸದಸ್ಯರಾಗಿ, ನಂತರ ಮತ್ತೊಂದು ಬಾರಿ ಸದಸ್ಯರಾಗಿ ಕಾರ್ಯನಿರ್ವಹಿಸಿದ ಇವರಿಗೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲು ತೊಡಕಾಗಲಿಲ್ಲ. ಗೌರವಾನ್ವಿತ ಸದಸ್ಯರೊಂದಿಗೆ ಅನೇಕ ಯೋಜನೆಗಳನ್ನು ಕಾರ್ಯರೂಪಕ್ಕಿಳಿಸಿದರು. ಮೂರು ವರ್ಷಗಳಲ್ಲಿ ತಮ್ಮ ಕಲಾ ಕ್ಷೇತ್ರದ ಅನುಭವಗಳನ್ನು ಮತ್ತು ಪರಿಣಿತಿಯನ್ನು ಅನುಷ್ಠಾನಗೊಳಿಸಿದ ತೃಪ್ತಿ ಇವರಿಗಿದೆ. ಕೊಡಗಿನ ಎಲ್ಲಾ ಜನವರ್ಗಗಳಲ್ಲಿ ಜನಪದ ಕಲೆ-ಕಲಾವಿದರಿಗೆ ಮತ್ತು ಅವುಗಳ ಉಳಿವು ಬೆಳವಣಿಗೆಗೆ ಹೆಚ್ಚು ಒತ್ತು ನೀಡಿ ಪೋತ್ಸಾಹಿಸಿದರು.
:: ಸಂಘ ಸಂಸ್ಥೆಗಳಲ್ಲಿ ಸಕ್ರೀಯ ::
ಕಲಾ ಸೇವೆಯಲ್ಲಿ ಮಾತ್ರವಲ್ಲದೆ ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲೂ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡರು. ಮಡಿಕೇರಿಯ ಕೊಡವ ಸಮಾಜದ ಸದಸ್ಯರಾಗಿ ಮಹಿಳಾ ಸಮಾಜದ ನಿರ್ದೇಶಕಿಯಾಗಿ, ಮಡಿಕೇರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷರಾಗಿ, ಮಡಿಕೇರಿ ನಗರ ಸಭೆಯ ಸದಸ್ಯರಾಗಿ, ಜನರಲ್ ತಿಮ್ಮಯ್ಯ ಶಾಲೆ ಆಡಳಿತ ಮಂಡಳಿ ಸದಸ್ಯೆಯಾಗಿ, ಜನತಾ ಬಜಾರ್ ಮತ್ತು ಮಡಿಕೇರಿ ತಾಲ್ಲೂಕು ಯುವ ಜನ ಒಕ್ಕೂಟದ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.
:: ಕುಟುಂಬದ ಪೋತ್ಸಾಹ ::
ವಕೀಲರಾದ ಐಮುಡಿಯಂಡ ಮಾಚಯ್ಯ ಹಾಗೂ ರಾಣಿ ಮಾಚಯ್ಯ ದಂಪತಿಗೆ ಇಬ್ಬರು ಮಕ್ಕಳು. ಪುತ್ರ ಸತೀಶ್, ಪುತ್ರ ಸರಿತಾ, ಇಬ್ಬರಿಗೂ ವಿವಾಹವಾಗಿದೆ. 2007ರಲ್ಲಿ ಮಾಚಯ್ಯನವರು ತಮ್ಮ 70ನೇ ವಯಸ್ಸಿನಲ್ಲಿ ನಿಧನರಾದರು. ಅವರ ನಿಧನ ನಂತರವೂ ಪುತ್ರ ಸತೀಶ್, ಅವರ ಪತ್ನಿ ಜಯಾ ಸತೀಶ್ ಹಾಗೂ ಪುತ್ರಿ ಸರಿತಾ, ಅವರ ಪತಿ ಎನ್.ಕೆ.ದೇವಯ್ಯ ಅವರ ಸಹಕಾರದಿಂದ ಸಾಂಸ್ಕೃತಿಕ ಚಟವಟಿಕೆಗಳನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ.
:: ಕೊಡಗಿನ ಮಹಿಳಾ ಸಾಂಸ್ಕೃತಿಕ ರಾಯಭಾರಿ ::
ಸುಮಾರು 50 ವರ್ಷಗಳಿಗೂ ಹೆಚ್ಚು ಕಾಲ ಕೊಡಗು ಜಿಲ್ಲೆಯ ವಿವಿಧ ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಚಟುವಟಿಕೆಗಳಲ್ಲಿ ಭಾಗಿಯಾಗಿ ಕಲೆ-ಕಲಾವಿದರು ಹೆಣ್ಣು ಮಕ್ಕಳ ಶಿಕ್ಷಣ ಮತ್ತಿತರ ಕಾರ್ಯಗಳಿಂದಾಗಿ ರಾಣಿ ಮಾಚಯ್ಯ ಅವರು ಜಿಲ್ಲೆಯಾದ್ಯಂತ ಮನೆಮಾತಾಗಿದ್ದಾರೆ. ಇವರು ಕೊಡಗಿನ ಮಹಿಳಾ ಸಾಂಸ್ಕೃತಿಕ ರಾಯಭಾರಿ ಎಂದರೂ ತಪ್ಪಾಗಲಾರದು.
:: ರಾಜ್ಯ, ರಾಷ್ಟ್ರೀಯ ಉತ್ಸವಗಳಲ್ಲಿ ಭಾಗಿ ::
ತಮ್ಮ ಸಾಂಸ್ಕೃತಿಕ ಬದುಕಿನ ಘಟ್ಟದಲ್ಲಿ, ರಾಣಿ ಮಾಚಯ್ಯ ಅವರು ಭಾರತದಲ್ಲಿ ಜರುಗಿದ ಅನೇಕ ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಸಾಂಸ್ಕೃತಿಕ ಉತ್ಸವಗಳಲ್ಲಿ ತಮ್ಮ “ಉಮ್ಮತ್ತಾಟ್” ತಂಡದೊಂದಿಗೆ ಭಾಗಿಯಾಗಿದ್ದಾರೆ. ಕೊಡಗಿನ ಪ್ರಕೃತಿದತ್ತ ಸೌಂದಾರ್ಯವನ್ನು ಮೀರಿಸುವ ಚೆಲುವೆಯರ ತಂಡದ ನೃತ್ಯ ಪ್ರದರ್ಶನ ಆಕರ್ಷಕ ಮತ್ತು ಯಶಸ್ವಿ ಕಾರ್ಯಕ್ರಮಗಳೆಂದು ಪ್ರಶಂಸಿಸಲ್ಪಟ್ಟಿದೆ.
:: ಪ್ರಶಸ್ತಿ ಸನ್ಮಾನಗಳು ::
ರಾಣಿಮಾಚಯ್ಯ ಅವರ ಸುದೀರ್ಘ ಕಲಾಸೇವೆ ಮತ್ತು ಸಾಮಾಜಿಕ ಸೇವೆಯನ್ನು ಪರಿಗಣಿಸಿ ಕರ್ನಾಟಕ ಸರ್ಕಾರ 2005ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಕೊಡಗು ಜಿಲ್ಲೆಯ ಕೊಡವ ಸಮಾಜ, ಕರ್ನಾಟಕ ಸಂಘ, ಕನ್ನಡ ಸಾಹಿತ್ಯ ಪರಿಷತ್ತಲ್ಲದೆ ಅನೇಕ ಸಂಘ ಸಂಸ್ಥೆಗಳು ಆದರದಿಂದ ಗೌರವಿಸಿವೆ. 2006-07 ರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗೌರವಿಸಿದೆ. ರಾಜ್ಯ ಮತ್ತು ರಾಷ್ಟ್ರದ ಅನೇಕ ಸಂಘ ಸಂಸ್ಥೆಗಳು ಇವರ ಅವಿರಹಿತ ಕಲಾ ಸೇವೆಯನ್ನು ಕೊಂಡಾಡಿ, ಗೌರವದಿಂದ ಅಭಿನಂದಿಸಿ ಸನ್ಮಾನಿಸಿವೆ.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಜನಪದ ಮತ್ತು ಯಕ್ಷಗಾನ ಪ್ರಶಸ್ತಿ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಏಳ್‍ನಾಡು ಕೊಡವ ಸಂಘದ ಪ್ರಶಸ್ತಿ, ಮಂಗಳೂರು ವಿಶ್ವವಿದ್ಯಾನಿಲಯದ ಪ್ರಶಸ್ತಿ, ಕೊಡವ ಸಮಾಜದಿಂದ ಪ್ರಶಸ್ತಿ, ಕರ್ನಾಟಕ ಉರ್ದು ಪ್ರಶಸ್ತಿ ಲಿಭಿಸಿದೆ. 1994ರಲ್ಲಿ ಪಂಜಾಬ್‍ನಲ್ಲಿ ಜರುಗಿದ ನೆಹರು ಯುವ ಕೇಂದ್ರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಇವರ ಉಮ್ಮತ್ತಾಟ್ ತಂಡಕ್ಕೆ ಶಿಸ್ತು ಮತ್ತು ಅಚ್ಚುಕಟ್ಟುತನಕ್ಕಾಗಿ ರಾಷ್ಟ್ರಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ನೃತ್ಯ ಸ್ಪರ್ಧೆಯಲ್ಲಿ ದೆಹಲಿ ಫೆಸ್ಟಿವಲ್‍ನಲ್ಲಿ ಪ್ರಥಮ ಬಹುಮಾನ, ಯೂತ್ ಆರ್ಗನೈಸೇಷನ್‍ನಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎರಡು ಮೊದಲ ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿಯ ಇಲಾಖೆ ಆಯೋಜಿಸಿದ್ದ ಹಂಪಿ ಉತ್ಸವ, ಕದಂಬ ಉತ್ಸವ, ಬಾದಾಮಿ ಉತ್ಸವ, ನೆಹರೂ ಯುವ ಕೇಂದ್ರದ ಉತ್ಸವಗಳು, 2009ರಲ್ಲಿ ಕಲ್ಕತ್ತದಲ್ಲಿ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮ, 1994 ದೆಹಲಿಯಲ್ಲಿ ಜರುಗಿದ “ಪೂಲ್‍ವಾಲನ್ ಶೋರ್‍ಹೈ” ಕಾರ್ಯಕ್ರಮ, ಮೈಸೂರು ದಸರಾ ಉತ್ಸವಗಳು, ಚಿತ್ರದುರ್ಗ ಉತ್ಸವ. ಜನಪದ ಜಾತ್ರೆ, ಗೋವಾ ಉತ್ಸವ, ಕರಾವಳಿ ಉತ್ಸವ, ನಾಗಪುರ ಉತ್ಸವ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶದಲ್ಲಿ ಜರುಗಿದ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ, ಮಿಜೋರಾಂ, ಮುಂಬೈ ಕರ್ನಾಟಕ ಸಂಘ, ಮಧ್ಯ ಪ್ರದೇಶ, ಕೇರಳ, ದೆಹಲಿ ಕರ್ನಾಟಕ ಸಂಘ, ಜಮ್ಮು ಮತ್ತು ಕಾಶ್ಮೀರ, ಚತ್ತೀಸ್ ಘಡ್, ಪಾಂಡಿಚೇರಿ, ಅಂಡಮಾನ್- ನಿಕೋಬರ್ ಮುಂತಾದ ರಾಜ್ಯಗಳಲ್ಲಿ, ಜಿಲ್ಲೆ, ನಗರಗಳಲ್ಲಿ “ಉಮ್ಮತ್ತಾಟ್”, “ಕೋಲಾಟ” ಹಾಗೂ ಕನ್ನಡದ ಕಂಪನ್ನು ಬೀರುವ “ಹಚ್ಚೇವು ಕನ್ನಡದ ದೀಪ” ಗೀತ ನೃತ್ಯವನ್ನು ಯಶಸ್ವಿಯಾಗಿ ಪ್ರದರ್ಶಿಸಿದ್ದಾರೆ. “ಪೂಲ್‍ವಾಲನ್ ಶೋರ್‍ಹೈ” ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಇದೆ.
:: ಶಿಕ್ಷಣಕ್ಕೆ ನೆರವು ::
ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡಿ ಅವರಿಗೆ ಭವಿಷ್ಯದ ಹಾದಿ ತೋರಿಸುವ ಕಾಯಕದಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವ ರಾಣಿ ಮಾಚಯ್ಯ ಅವರು ಸಾಮಾಜಿಕ ಕಳಕಳಿಯನ್ನು ಮೆರೆಯುತ್ತಿದ್ದಾರೆ.
