Advertisement
4:56 AM Friday 8-December 2023

ಕಾರ್ಮಿಕರ ಜೀವ ಉಳಿದದ್ದೇ ಹೆಚ್ಚು : ನಿಯಮ ಉಲ್ಲಂಘಿಸುವ ವಾಹನಗಳ ವಿರುದ್ಧ ಕ್ರಮಕ್ಕೆ ಒತ್ತಾಯ

16/02/2023

ನಾಪೋಕ್ಲು ಫೆ.16 : ತೋಟದ ಕೆಲಸಕ್ಕೆಂದು ಕಾರ್ಮಿಕರನ್ನು ಕರೆದೊಯ್ಯುವಾಗ ಪಿಕ್ ಅಪ್  ವಾಹನದ ಜಕ್ರ ಕಳಚಿದ ಪರಿಣಾಮ ಭಾರಿ ಅಪಘಾತದಿಂದ   ಕಾರ್ಮಿಕರು  ಪಾರಾದ ಘಟನೆ ನಾಪೋಕ್ಲು ಪಾರಾಣೆ ಮುಖ್ಯ ರಸ್ತೆಯ ಬೇತು ಗ್ರಾಮದ ತಿರುವಿನಲ್ಲಿ ಬುಧವಾರ  ನಡೆದಿದೆ.
ಸಮೀಪದ ಎಮ್ಮೆಮಾಡು ಕೂರುಳಿ ಗ್ರಾಮದಿಂದ ಕೆಲಸಕ್ಕೆಂದು ಕಾರ್ಮಿಕರನ್ನು ಪಿಕ್ ಅಪ್ ವಾಹನದಲ್ಲಿ ಸಾಗಿಸುತ್ತಿದ್ದಾಗ ವಾಹನದ ಆಕ್ಸಲ್ ತುಂಡಾದ ಪರಿಣಾಮ ಚಕ್ರಕಳಚಿಕೊಂಡು ಅವಘಡ ಸಂಭವಿಸಿದೆ.
ವಾಹನದಲ್ಲಿ ಕಾರ್ಮಿಕರನ್ನು ಸಾಗಿಸುತ್ತಿದ್ದ  ದೃಶ್ಯ ನಾಪೋಕ್ಲುವಿನ ಆಟೋ ಚಾಲಕರೊಬ್ಬರ ಮೊಬೈಲ್ ನಲ್ಲಿ ಸೆರೆಸಿಕ್ಕಿದೆ. ಇದರಲ್ಲಿ ಪಿಕ್ ಅಪ್ ವಾಹನದ ಚಕ್ರ ಕಳೆಚುವ ದೃಶ್ಯ ಸೆರೆಯಾಗಿದ್ದು ಭಯಾನಕವಾಗಿದೆ. ಸುಮಾರು 20.ಮೀ ನಷ್ಟು ದೂರ ಚಲಿಸಿದ ವಾಹನವನ್ನು ಪಲ್ಟಿಯಾಗದಂತೆ ಚಾಲಕ ಸಮಯ ಪ್ರಜ್ಞೆ ಮೆರೆದು ನಿಯಂತ್ರಿಸಿದ್ದಾನೆ.ಇದರಿಂದ ಭಾರಿ ಅನಾಹುತ ತಪ್ಪಿದಂತ್ತಾಗಿದೆ. ವಾಹನದಲ್ಲಿ ಸಣ್ಣಮಕ್ಕಳು ಸೇರಿದಂತೆ 15ಕ್ಕೂ ಅಧಿಕ ಕಾರ್ಮಿಕರಿದ್ದು ಅದೃಷ್ಟವಶಾತ್  ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಾಪೋಕ್ಲು ವ್ಯಾಪ್ತಿಯಲ್ಲಿ ಕಾಫಿ, ಕಾಳುಮೆಣಸು ಕೊಯ್ಲು ಕಾರ್ಯ ಬಿರುಸಿನಿಂದ ಸಾಗುತ್ತಿದ್ದು, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಕಾರ್ಮಿಕರು ಆಗಮಿಸುತ್ತಿದ್ದಾರೆ. ನಿಯಮ ಉಲ್ಲಂಘಿಸಿ ವಾಹನಗಳಲ್ಲಿ ಅತ್ಯಧಿಕ ಕಾರ್ಮಿಕರನ್ನು ಕರೆದೊಯ್ಯುತ್ತಿರುವುದರಿಂದ ಇಂತಹ ಅನಾಹುತಗಳು  ಸಂಭವಿಸುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಪೋಲಿಸ್ ಇಲಾಖೆಗೆ ಮಾಹಿತಿ ನೀಡಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ. ಇನ್ನಾದರು ಪೊಲೀಸರು ಎಚ್ಚೆತ್ತುಕೊಂಡು ನಿಯಮ ಬಾಹಿರವಾಗಿ ಕಾರ್ಮಿಕರನ್ನು ಕರೆದೊಯ್ಯುವ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನಾಪೋಕ್ಲು ವಾಹನ ಚಾಲಕ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಅಬ್ದುಲ್ ರಜಾಕ್ ಹಾಗೂ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ. (( ವರದಿ : ಝಕರಿಯ ನಾಪೋಕ್ಲು ))